ADVERTISEMENT

ಸನ್ನಿ ಲಿಯೋನ್ ಅವರ ವಿಡಿಯೊ ಆಲ್ಬಂ ನಿಷೇಧಕ್ಕೆ ಬೃಂದಾವನದ ಅರ್ಚಕರ ಒತ್ತಾಯ

ಐಎಎನ್ಎಸ್
Published 26 ಡಿಸೆಂಬರ್ 2021, 6:26 IST
Last Updated 26 ಡಿಸೆಂಬರ್ 2021, 6:26 IST
ಸನ್ನಿ ಲಿಯೋನ್
ಸನ್ನಿ ಲಿಯೋನ್   

ಮಥುರಾ: ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಇತ್ತೀಚಿನ ವಿಡಿಯೊ ಆಲ್ಬಂ ವಿವಾದಕ್ಕೆ ಕಾರಣವಾಗಿದ್ದು, ಇದನ್ನು ನಿಷೇಧಿಸಬೇಕೆಂದು ಬೃಂದಾವನದ ಅರ್ಚಕರು ಒತ್ತಾಯಿಸಿದ್ದಾರೆ. ವಿಡಿಯೊದಲ್ಲಿ ಸನ್ನಿ ಲಿಯೋನ್ ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.

'ಮಧುಬನ್‌ ಮೇ ರಾಧಿಕಾ ನಾಚೆ' ಎಂಬ ಹೆಸರಿನ ವಿಡಿಯೊ ಆಲ್ಬಂ ಅನ್ನು ಸರಿಗಮ ಮ್ಯೂಸಿಕ್(Saregama music) ಇತ್ತೀಚೆಗಷ್ಟೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿತ್ತು.

ಈ ಹಾಡಿನಲ್ಲಿ ಸನ್ನಿ ಲಿಯೋನ್ ಅವರ ನೃತ್ಯವು ಅಶ್ಲೀಲವಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಶನಿವಾರ ಹಿಂದೂ ಸಂಘಟನೆಯು ಪ್ರತಿಭಟನೆ ನಡೆಸಿ ನಟಿಯ ವಿರುದ್ಧ ಘೋಷಣೆ ಕೂಗಿತ್ತು. ಈ ಕುರಿತು ದೂರು ದಾಖಲಿಸಿದ್ದ ಸಂಘಟನೆಯ ಸದಸ್ಯರು, ಸನ್ನಿ ಲಿಯೋನ್ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಒತ್ತಾಯಿಸಿದ್ದರು.

ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಎಂ.ಪಿ.ಸಿಂಗ್ ತಿಳಿಸಿದ್ದರು.

'ಸನ್ನಿ ಲಿಯೋನ್ ಅವರ ವಿಡಿಯೊ ಆಲ್ಬಂ ಅನ್ನು ನಿಷೇಧಿಸಬೇಕು ಹಾಗೂ ನಟಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ರಾಧಾ ರಾಣಿಯ ಹೆಸರಿನಲ್ಲಿ ಅಶ್ಲೀಲತೆಯನ್ನು ನಾವು ಸಹಿಸುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ಪತ್ರ ಬರೆಯುತ್ತೇವೆ' ಎಂದು ಬೃಂದಾವನದ ಮಹಾಮಂಡಲೇಶ್ವರ ಯೋಗಿ ನವಲ ಗಿರಿ ಮಹಾರಾಜ್ ತಿಳಿಸಿದ್ದಾರೆ.

ಬೃಂದಾವನದ ಮೋಹಿನಿ ಬಿಹಾರಿ ಶರಣ್ ಮಹಾರಾಜ್ ಮಾತನಾಡಿ, ಈ ರೀತಿಯ ನೃತ್ಯವು ಇಡೀ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ರಾಧಾ ರಾಣಿಯ ಹೆಸರಿನಲ್ಲಿ ಪ್ರಚಾರ ಪಡೆಯಲು ಈ ರೀತಿಯ ಹೀನ ಕೃತ್ಯ ಎಸಗಲಾಗಿದೆ. ಈ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿಲ್ಲವಾದರೆ ನಾವು ನ್ಯಾಯಾಲಯಕ್ಕೆ ತೆರಳುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.