ನವದೆಹಲಿ: ‘ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಸಂಬಂಧಿಸಿದಂತೆ ನಾನು ಯಾರ ಹೆಸರನ್ನೂ ಹೇಳಿಲ್ಲ’ ಎಂದು ಪ್ರಕರಣದ ಪ್ರಮುಖ ಆರೋಪಿ, ಖರೀದಿ ಏಜೆಂಟ್ ಕ್ರಿಶ್ಚಿಯನ್ ಮಿಶೆಲ್ ದೆಹಲಿ ಕೋರ್ಟ್‌ಗೆ ಹೇಳಿದ್ದಾನೆ.
ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದೆ ಎಂದೂ ಆರೋಪಿಸಿದ್ದಾನೆ.
‘ಮಾಧ್ಯಮಗಳಿಗೆ ಆರೋಪ ಪಟ್ಟಿಯನ್ನು ನೀಡಲಾಗಿದೆ. ಆದರೆ, ಅದನ್ನು ಮೈಕೆಲ್‌ಗೆ ನೀಡಲಾಗಿಲ್ಲ. ಮಾತ್ರವಲ್ಲ ಆತ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ’ ಎಂದು ಆರೋಪಿಯ ಪರ ವಕೀಲ ಅಲ್‌ಜೋ ಕೆ. ಜೋಸೆಫ್ ಹೇಳಿದ್ದಾರೆ.
ಆರೋಪಪಟ್ಟಿ ಕೋರ್ಟ್ ಗಮನಕ್ಕೆ ಬರುವ ಮುನ್ನ ಮಾಧ್ಯಮಗಳಿಗೆ ಹೇಗೆ ಸೋರಿಕೆಯಾಯಿತು ಎಂದೂ ಜೋಸೆಫ್ ಪ್ರಶ್ನಿಸಿದ್ದಾರೆ. ವಿಚಾರಣೆ ಏ. 6ಕ್ಕೆ ನಿಗದಿಯಾಗಿದೆ.
ಕ್ರಿಶ್ಚಿಯನ್ ಮಿಶೆಲ್‌ನನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಗುರುವಾರ ಆತನ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.ಸಂಕೇತಾಕ್ಷರ ‘ಎಪಿ’ ಎಂದರೆ ರಾಹುಲ್ ಕುಟುಂಬಕ್ಕೆ ಆಪ್ತರಾಗಿರುವ ಅಹಮದ್ ಪಟೇಲ್ ಎಂದು ಹಗರಣದ ಆರೋಪಿ ಮಿಶೆಲ್ ಕ್ರಿಶ್ಚಿಯನ್ ಗುರುತಿಸಲು ಬಳಸಿದ ಪದಗಳು ಎಂದು ಜಾರಿ ನಿರ್ದೇಶನಾಲಯವು ಗುರುತಿಸಿದೆ.
ಹೆಲಿಕಾಪ್ಟರ್ ಖರೀದಿ ವ್ಯವಹಾರ ಸ್ಥಗಿತಗೊಂಡಾಗ ಸುಮಾರು ₹ 233 ಕೋಟಿಯಷ್ಟನ್ನು ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಪಾವತಿಸಲಾಗಿತ್ತು ಎಂಬ ವಿವರ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿದೆ.
ರಾಹುಲ್ ಗಾಂಧಿ ಮೌನವೇಕೆ: ಜೇಟ್ಲಿ ಪ್ರಶ್ನೆ
ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಮತ್ತು ‘ಕುಟುಂಬ’ದ ಉಲ್ಲೇಖ ಇದ್ದರೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೌನವಹಿಸಿರುವುದೇಕೆ? ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ.
ಇಲ್ಲಿ ಉಲ್ಲೇಖಿಸಲಾದ ‘ಆರ್‌ಜಿ’, ‘ಎಪಿ’ ಮತ್ತು ‘ಎಫ್‌ಎಎಮ್’ ಸಂಕೇತ ಪದಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.‘ಗಂಭೀರವಾದ ಆರೋಪಕ್ಕೆ ಏನೂ ಪ್ರತಿಕ್ರಿಯಿಸದವರಿಗೆ ದೇಶ ಏನು ಉತ್ತರಿಸಲಿದೆ ಎಂಬುದನ್ನು ಊಹಿಸಬಹುದು’ ಎಂದು ವ್ಯಂಗ್ಯವಾಡಿದರು.
‘ಅಗ್ಗದ ತಂತ್ರ‘
ಇದು ‘ಅಗ್ಗದ ಚುನಾವಣಾ ತಂತ್ರ’ ಎಂದು ಕಾಂಗ್ರೆಸ್ ಬಣ್ಣಿಸಿದೆ.‘ಸೋಲಿನ ಭೀತಿಯಲ್ಲಿರುವ ಮೋದಿ ಈ ತಂತ್ರದ ಮೊರೆ ಹೋಗಿದ್ದಾರೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣ್‌ದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.