ADVERTISEMENT

ವ್ಯಾಪಂ ಹಗರಣ: ಚೌಹಾಣ್, ಉಮಾ ಭಾರತಿ ವಿರುದ್ಧ ದಿಗ್ವಿಜಯ್ ಕ್ರಿಮಿನಲ್ ಮೊಕದ್ದಮೆ

ಏಜೆನ್ಸೀಸ್
Published 20 ಸೆಪ್ಟೆಂಬರ್ 2018, 3:36 IST
Last Updated 20 ಸೆಪ್ಟೆಂಬರ್ 2018, 3:36 IST
ದಿಗ್ವಿಜಯ್ ಸಿಂಗ್ (ಎಡ ಚಿತ್ರ), ಉಮಾ ಭಾರತಿ ಮತ್ತು ಶಿವರಾಜ್ ಸಿಂಗ್ ಚೌಹಾಣ್
ದಿಗ್ವಿಜಯ್ ಸಿಂಗ್ (ಎಡ ಚಿತ್ರ), ಉಮಾ ಭಾರತಿ ಮತ್ತು ಶಿವರಾಜ್ ಸಿಂಗ್ ಚೌಹಾಣ್   

ಭೋಪಾಲ್: ವ್ಯಾಪಂ ಹಗರಣಕ್ಕೆ ಸಂಬಂಧಿಸಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವೆ ಉಮಾ ಭಾರತಿ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.

ಪ್ರಮುಖ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದ್ದ ಮಹತ್ವದ ದಾಖಲೆಯನ್ನು ಅಳಿಸಿಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಚೌಹಾಣ್, ಉಮಾ ಭಾರತಿ ಮಾತ್ರವಲ್ಲದೆ ಇಂದೋರ್ ಅಪರಾಧ ದಳದ ಅಧಿಕಾರಿಗಳೂ ಸೇರಿದಂತೆ ಒಟ್ಟು 18 ಮಂದಿಯನ್ನು ಹೆಸರಿಸಲಾಗಿದೆ.

ಹಗರಣದ ಬಗ್ಗೆ ಸಿಬಿಐಗೂ ಮುನ್ನ ತನಿಖೆ ನಡೆಸಿದ್ದ ಇಂದೋರ್ ಅಪರಾಧ ದಳದ ಅಧಿಕಾರಿಗಳು ಪ್ರಮುಖ ಆರೋಪಿ ನಿತಿನ್ ಮಹೀಂದ್ರಾ ಬಳಿಯಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಹಾರ್ಡ್ ಡಿಸ್ಕ್‌ನಲ್ಲಿದ್ದ ಎಕ್ಸೆಲ್ ಶೀಟ್‌ನಲ್ಲಿ ಕೆಲವು ಅಂಶಗಳನ್ನು ಅಳಿಸಿಹಾಕಿದ್ದಾರೆ. ಚೌಹಾಣ್ ಅವರನ್ನು ಆರೋಪಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಕೃತ್ಯ ಎಸಲಾಗಿದೆ ಎಂದು ದಿಗ್ವಿಜಯ್ ಪರ ಈ ಹಿಂದೆ ವಾದ ಮಂಡಿಸಿದ್ದ ವಕೀಲ ಅಜಯ್ ಗುಪ್ತಾ ಆರೋಪಿಸಿದ್ದಾರೆ. ಆದರೆ, ಈ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಿಬಿಐ ಹೇಳಿದೆ.

ವ್ಯಾಪಂ ಹಗರಣ:ಮಧ್ಯಪ್ರದೇಶ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಮತ್ತು ನೇಮಕಾತಿಗೆ ಸಂಬಂಧಿಸಿದ ಹಗರಣ ಇದಾಗಿದೆ.ಸ್ವಾಯತ್ತ ಸಂಸ್ಥೆಯಾಗಿರುವ ‘ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿ’ಯು ನಡೆಸಿರುವ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿ ಹಗರಣವು‘ವ್ಯಾಪಂ’ ( Vyapam - MP Vyavasayik Pariksha Mandal) ಎಂದೇ ಕುಖ್ಯಾತಿ ಪಡೆದಿದೆ.ಈ ಹಗರಣದಲ್ಲಿ ಮಾಜಿ ಶಿಕ್ಷಣ ಸಚಿವ ಲಕ್ಷ್ಮೀಕಾಂತ ಶರ್ಮಾ ಸೇರಿದಂತೆ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ಉದ್ಯಮಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹಗರಣದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಅವರ ಹೆಸರೂ ಕೇಳಿಬಂದಿತ್ತು. ಈ ಹಗರಣವು 2013ರಲ್ಲಿ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:ನಿಗೂಢ ‘ವ್ಯಾಪಂ’ ಹಗರಣ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.