ನವದೆಹಲಿ: ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಬಾಲಾಕೋಟ್ ಶಿಬಿರದ ಮೇಲಿನ ವಾಯುದಾಳಿಯ ರೂವಾರಿಗಳಲ್ಲಿ ಒಬ್ಬರಾದ ಏರ್ ಮಾರ್ಷಲ್ ಚಂದ್ರಶೇಖರನ್ ಹರಿಕುಮಾರ್ ವಿರುದ್ಧವೇ ಸುಳ್ಳು ಸುದ್ದಿ ಹಬ್ಬಿಸುವ ಅಭಿಯಾನವನ್ನು ಪಾಕಿಸ್ತಾನ ನಡೆಸಿದೆ. 39 ವರ್ಷಗಳ ಸೇವೆಯಿಂದ ಅವರು ನಿವೃತ್ತರಾದ ದಿನವೇ ಅವರು ಇಂತಹುದೊಂದು ಅಭಿಯಾನದ ಗುರಿಯಾದರು.
‘ವಿಫಲ ನಿರ್ದಿಷ್ಟ ದಾಳಿಯಲ್ಲಿ ಭಾರತೀಯ ವಾಯುಪಡೆಯು ಎರಡು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ. ಅದಕ್ಕಾಗಿ ಚಂದ್ರಶೇಖರನ್ ಅವರನ್ನು ವಜಾ ಮಾಡಲಾಗಿದೆ’ ಎಂಬ ಅಭಿಯಾನವನ್ನು ಪಾಕಿಸ್ತಾನದ ಸಾಮಾಜಿಕ ಜಾಲತಾಣ ಖಾತೆಯೊಂದರಿಂದ ಹರಿಬಿಡಲಾಗಿದೆ.
ವಾಯುಪಡೆಯ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದ ಚಂದ್ರಶೇಖರನ್ ಅವರಿಗೆ ಶುಕ್ರವಾರ ಕರ್ತವ್ಯದ ಕೊನೆಯ ದಿನವಾಗಿತ್ತು. ಜೈಷ್ ಎ ಮೊಹಮ್ಮದ್ ವಿರುದ್ಧ ಯಶಸ್ವೀ ದಾಳಿಯ ಸಂತೃಪ್ತಿಯೊಂದಿಗೆ ಅವರು ನಿವೃತ್ತರಾಗಿದ್ದಾರೆ. ಆದರೆ, ಪಾಕಿಸ್ತಾನ ಅದನ್ನು ತಪ್ಪಾಗಿ ಬಿಂಬಿಸಲು ಯತ್ನಿಸಿತು.
ವಾಯುದಾಳಿಯ ವಿಚಾರದಲ್ಲಿ ಪಾಕಿಸ್ತಾನವು ನಿರಂತರವಾಗಿ ಸುಳ್ಳು ಸುದ್ದಿ ಅಭಿಯಾನ ನಡೆಸುತ್ತಲೇ ಬಂದಿದೆ. ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಆರಂಭದಲ್ಲಿ ಹೇಳಿತ್ತು. ಮೂವರು ಪೈಲಟ್‌ಗಳು ಕೆಳಗೆ ಉರುಳಿದ್ದಾರೆ ಎಂದಿತ್ತು. ಬಳಿಕ ಇಬ್ಬರು ಪೈಲಟ್‌ಗಳನ್ನು ಸೆರೆ ಹಿಡಿಯಲಾಗಿದೆ ಎಂದಿತ್ತು. ಕೊನೆಗೆ, ಸೆರೆ ಸಿಕ್ಕಿರುವುದು ಒಬ್ಬ ಪೈಲಟ್ ಮಾತ್ರ ಎಂದಿತ್ತು.
ನಿಜ ಏನು ಎಂಬುದನ್ನು ಹೇಳಿದ ವಾಯುಪಡೆಯ ಉಪಮುಖ್ಯಸ್ಥ ಆರ್.ಜಿ.ಕೆ.ಕಪೂರ್ ಅವರು ಪಾಕಿಸ್ತಾನದ ಸುಳ್ಳಿನ ಜಾಲವನ್ನು ಬಯಲು ಮಾಡಿದ್ದಾರೆ.
ಚಂದ್ರಶೇಖರನ್ ಅವರ ಸ್ಥಾನಕ್ಕೆಕಾರ್ಗಿಲ್ ಯುದ್ಧದ ಹೀರೊ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಅವರು ನೇಮಕವಾಗಿದ್ದಾರೆ. ನಂಬಿಯಾರ್ ಭಾರಿ ಅನುಭವಿ ಪೈಲಟ್. ಅವರಿಗೆ 42 ವಿವಿಧ ರೀತಿಯ ಯುದ್ಧ ವಿಮಾನ ಹಾರಿಸಿದ ಅನುಭವ ಇದೆ. ಮಿರಾಜ್ ಯುದ್ಧವಿಮಾನವನ್ನು ಅವರು 2,300 ತಾಸು ಹಾರಿಸಿದ್ದಾರೆ. ಈ ವಿಮಾನದಲ್ಲಿ ಇಷ್ಟೊಂದು ಅನುಭವ ಇರುವವರು ಬೇರೆ ಯಾರೂ ಇಲ್ಲ. ಅವರಿಗೆ 5,100 ತಾಸು ವಿಮಾನ ಹಾರಿಸಿದ ಅನುಭವ ಇದೆ.
ಈ ವರ್ಷದ ಕೊನೆಯಲ್ಲಿ ವಾಯುಪಡೆಗೆ ಸೇರ್ಪಡೆಯಾಗಲಿರುವ ರಫೇಲ್ ಯುದ್ಧ ವಿಮಾನ ಹಾರಾಟದ ತರಬೇತಿ ಪಡೆದ ಮೊದಲ ತಂಡದಲ್ಲಿ ನಂಬಿಯಾರ್ ಅವರೂ ಇದ್ದರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.