ಮುಂಬೈ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರ ಸದಸ್ಯತ್ವದ ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವಾಲಯವು ಶಿವಸೇನಾದ ಶಿಂದೆ ಮತ್ತು ಉದ್ಧವ್ ಬಣದ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿರುವ ಬೆನ್ನಲ್ಲೇ ವಿಧಾನಸಭಾ ಸ್ಪೀಕರ್ ನಡೆಯ ಮೇಲೆ ಎಲ್ಲರ ಕುತೂಹಲದ ಕಣ್ಣು ನೆಟ್ಟಿದೆ.
ಸ್ಪೀಕರ್ ರಾಹುಲ್ ನಾರ್ವೇಕರ್ ಕೈಗೊಳ್ಳುವ ಕ್ರಮದ ಮೇಲೆ ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರದ ಭವಿಷ್ಯವೂ ನಿಂತಿದೆ. ಮತ್ತೊಂದೆಡೆ ಶಿವಸೇನಾವು(ಯುಬಿಟಿ) ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಶಿಂದೆ ಬಣದ ಶಾಸಕರ ಅನರ್ಹತೆ ಅರ್ಜಿ ಕುರಿತಂತೆ ಸ್ಪೀಕರ್ ಅವರೇ ನಿಗದಿತ ಅವಧಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪ್ರಸ್ತುತ ಸ್ಪೀಕರ್ ಅವರು ಶಿಂದೆ ಸೇರಿದಂತೆ ಅವರ ಬಣದ 40 ಶಾಸಕರು ಮತ್ತು ಉದ್ಧವ್ ಬಣದ 14 ಶಾಸಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಅವರಿಂದ ವ್ಯತಿರಿಕ್ತ ಆದೇಶ ಹೊರಬಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಉದ್ಧವ್ ಠಾಕ್ರೆ ನಿರ್ಧರಿಸಿದ್ದಾರೆ.
ನಾಗ್ಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಹೊಸದಾಗಿ ಅನಪೇಕ್ಷಿತ ಬೆಳವಣಿಗೆ ತಲೆದೋರಿದೆ. ಇದನ್ನು ಬಿಜೆಪಿ ಹೇಗೆ ಸಂಭಾಳಿಸುತ್ತದೆ ಎಂಬ ಕುತೂಹಲ ನನಗೂ ಇದೆ’ ಎಂದು ಹೇಳಿದರು.
‘ಸ್ಪೀಕರ್ ನೀಡಿರುವ ನೋಟಿಸ್‌ಗೆ ಉತ್ತರಿಸಲು ಶಾಸಕರಿಗೆ ಏಳು ದಿನಗಳ ಕಾಲಾವಕಾಶವಿದೆ. ಶಿಂದೆ ಸೇರಿದಂತೆ ಅವರ ಬಣದ 16 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಕಾನೂನು ಚೌಕಟ್ಟಿನೊಳಗೆ ಸ್ಪೀಕರ್ ಅವರು ಕ್ರಮಕೈಗೊಳ್ಳಬೇಕಿದೆ. ಕಾನೂನುಬದ್ಧವಾಗಿ ಕ್ರಮ ಜರುಗಿಸಲು ಹಿಂಜರಿದರೆ ನಮಗೆ ಸುಪ್ರೀಂ ಕೋರ್ಟ್ ಬಾಗಿಲು ಯಾವಾಗಲೂ ತೆರೆದಿದೆ’ ಎಂದು ಪುನರುಚ್ಚರಿಸಿದರು.
‘ಬಿಜೆಪಿ ತಾನು ಹೇಳಿದಂತೆ ಎಂದಿಗೂ ನಡೆದುಕೊಂಡಿರುವ ನಿದರ್ಶನವಿಲ್ಲ. ನಮಗೆ ಅವರ ಒಣ ಉಪದೇಶ ಬೇಡ. ಸದ್ಯದ ಪರಿಸ್ಥಿತಿಯನ್ನು ಕಮಲ ಪಾಳಯ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡುತ್ತೇವೆ’ ಎಂದು ಹೇಳಿದರು.
ಕಳೆದ ವರ್ಷ ಜೂನ್‌ನಲ್ಲಿ ಏಕನಾಥ ಶಿಂದೆ ಅವರು ಬಂಡಾಯವೆದ್ದ ಪರಿಣಾಮ ಉದ್ಧವ್ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರ ಪತನಗೊಂಡಿತ್ತು. ಬಳಿಕ ಬಿಜೆಪಿ ಬೆಂಬಲದೊಂದಿಗೆ ಶಿಂದೆ ಅವರು ಮುಖ್ಯಮಂತ್ರಿ ಗಾದಿಗೇರಿದರು. ಕಳೆದ ವಾರ ಅಜಿತ್ ಪವಾರ್ ಅವರು ಎನ್‌ಸಿಪಿ ವಿಭಜನೆ ಮೂಲಕ ಶಿಂದೆ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.
ಇತ್ತೀಚೆಗೆ ಶಿವಸೇನಾವು(ಯುಬಿಟಿ) ಶಿಂದೆ ಬಣದ ಶಾಸಕರ ಅನರ್ಹತೆ ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಬಗ್ಗೆ ಸ್ಪೀಕರ್‌ಗೆ ಸೂಕ್ತ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿತ್ತು.
ಮುಂಬೈ: ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಉದ್ಧವ್ ಠಾಕ್ರೆ ಅವರು, ರಾಜ್ಯದಲ್ಲಿ ಪಕ್ಷ ಸಂಘಟನೆಗೆ ನಿರ್ಧರಿಸಿದ್ದಾರೆ. ಇದರ ಭಾಗವಾಗಿಯೇ ಭಾನುವಾರದಿಂದ ಎರಡು ದಿನಗಳ ಕಾಲ ವಿದರ್ಭ ವಲಯದಲ್ಲಿ ಅವರ ಪ್ರವಾಸ ಆರಂಭಗೊಂಡಿದೆ.
ಈ ಭಾಗವು ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಅಜಿತ್ ಪವಾರ್ ಅವರು ಶಿಂದೆ ನೇತೃತ್ವದ ಸರ್ಕಾರದ ಜೊತೆ ಕೈಜೋಡಿಸಿ ಒಂದು ವಾರದ ಪೂರ್ಣಗೊಂಡ ಬಳಿಕ ಉದ್ಧವ್ ಅವರು, ಪಕ್ಷದೊಳಗಿನ ಆಂತರಿಕ ಸಂಘರ್ಷದಿಂದ ಕುಗ್ಗಿ ಹೋಗಿರುವ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದಾರೆ.
ಬೆಳಿಗ್ಗೆಯೇ ನಾಗ್ಪುರಕ್ಕೆ ಆಗಮಿಸಿದ ಅವರು, ಪಕ್ಷದ ವಿವಿಧ ಘಟಕಗಳು ಮತ್ತು ಬೆಂಬಲಿಗರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಯಾವತ್ಮಾಲ್, ವಾಶಿಮ್, ಅಮರಾವತಿ, ಅಕೋಲಾ ಮತ್ತು ನಾಗ್ಪುರ ಭಾಗದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಯವತ್ಮಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2019ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿ ಮತ್ತು ಶಿವಸೇನಾ ನಡುವಣ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ತಲಾ ಎರಡೂವರೆ ವರ್ಷಗಳ ಅಧಿಕಾರದ ಹಂಚಿಕೆಯ ಒಪ್ಪಂದವಾಗಿತ್ತು. ಈ ಬಗ್ಗೆ ಅಮಿತ್ ಶಾ ಜೊತೆಗೂ ಚರ್ಚಿಸಿದ್ದೆ. ಆದರೆ, ಅದನ್ನು ಕಮಲ ಪಾಳಯ ಮುರಿಯಿತು’ ಎಂದು ಟೀಕಿಸಿದರು.
ಬಿಜೆಪಿ ಜೊತೆಗಿನ ತನ್ನ ದೀರ್ಘಕಾಲದ ಮೈತ್ರಿ ಕಡಿದುಕೊಂಡಿರುವ ಉದ್ಧವ್ ಅವರಿಗೆ ಶಿಂದೆ ಅವರಿಂದಲೂ ಸವಾಲು ಎದುರಾಗಿದೆ. ಹಾಗಾಗಿ, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅವರ ಪಾಲಿಗೆ ನಿರ್ಣಾಯಕವಾಗಿದೆ ಎಂದು ಆ ಪಕ್ಷದ ನಾಯಕರೊಬ್ಬರು ವಿವರಿಸಿದರು.
ವಿದರ್ಭ ವಲಯದಲ್ಲಿ ಬಂಜಾರ ಸಮುದಾಯದವರು ಹೆಚ್ಚಿರುವ ಪ್ರದೇಶಗಳಿಗೂ ಉದ್ಧವ್ ಭೇಟಿ ನೀಡಲು ನಿರ್ಧರಿಸಿದ್ದಾರೆ. ಆ ಸಮುದಾಯದ ಆರಾಧ್ಯ ದೇವತೆ ಪೋಹರಾದೇವಿ ದೇಗುಲಕ್ಕೂ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಮುಂಬೈ: ಉದ್ಧವ್ ಅವರ ಪ್ರವಾಸದ ಬಗ್ಗೆ ಕಟುವಾಗಿ ಟೀಕಿಸಿರುವ ಬಿಜೆಪಿಯು, ‘ಈಗಷ್ಟೇ ನಿಮಗೆ ವಿದರ್ಭದ ನೆನಪಾಗುತ್ತಿದೆ. ಮುಖ್ಯಮಂತ್ರಿಯಾಗಿದ್ದ ವೇಳೆ ನಿಮಗೆ ಮರೆಗುಳಿ ಕಾಯಿಲೆ ಇತ್ತೇ’ ಎಂದು ಪ್ರಶ್ನಿಸಿದೆ.
‘ಉದ್ಧವ್ ಅವರು ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ ವೇಳೆ ರಾಜ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿರಲಿಲ್ಲ. ಎರಡೂವರೆ ದಿನಗಳ ಭೇಟಿಯ ಉದ್ದೇಶವಾದರೂ ಏನು’ ಎಂದು ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವನಕುಲೆ ವ್ಯಂಗ್ಯವಾಡಿದ್ದಾರೆ.
‘ಸಿ.ಎಂ ಆಗಿದ್ದಾಗ ದೇವಾಲಯಗಳ ಬಾಗಿಲುಗಳನ್ನು ಮುಚ್ಚಿ ಯಥೇಚ್ಛವಾಗಿ ಮದ್ಯದಂಗಡಿಗಳ ಬಾಗಿಲುಗಳನ್ನು ತೆರೆಸಿದ್ದರು. ಈಗ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಬಾಳಸಾಹೇಬ್ ಠಾಕ್ರೆ ಅವರ ನಿಧನದ ಬಳಿಕ ನೀವು ಬಿಜೆಪಿ ಮತ್ತು ಹಿಂದುತ್ವಕ್ಕೆ ದ್ರೋಹ ಬಗೆದಿದ್ದೀರಿ. ರಾಜ್ಯದಲ್ಲಿ ಎಷ್ಟೇ ಪ್ರವಾಸ ಮಾಡಿದರೂ ನಿಮ್ಮ ನಿಲುವು ಏನೆಂಬುದು ಜನರಿಗೆ ತಿಳಿದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.