ಪಟ್ನಾ: ಬಿಹಾರದ ಪಟ್ನಾ ಜಿಲ್ಲೆಯಲ್ಲಿ ಬುಧವಾರ ಮನೆಯೊಂದರ ಗೋಡೆ ಕುಸಿದು ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ನಾದ ಹೊರವಲಯದ ಶ್ರೀಪಾಲ್‌ಪುರ ಪ್ರದೇಶದಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಘಟನೆ ನಡೆದಿದೆ. ಈ ವೇಳೆ ಅಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು.
‘ಪಂಪನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರ ಗೋಡೆ ಕುಸಿದು ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಶ್ರೀಪಾಲ್‌ಪುರ ಪ್ರದೇಶದ ನೀರಜ್ ಕುಮಾರ್ ಎಂಬವರಿಗೆ ಸೇರಿದ ಮನೆ ಇದು. ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವ ವೇಳೆ ಗೋಡೆ ಕುಸಿದಿದೆ’ ಎಂದು ಪಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ತಿಳಿಸಿದ್ದಾರೆ.
ಸುಮಾರು 100 ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದರು ಎಂದು ಅವರು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡವರನ್ನು ಪಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ.
ಪ್ರತಿ ಬುಧವಾರವೂ ಈ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.