ADVERTISEMENT

ಡ್ರಗ್ಸ್‌ ಪ್ರಕರಣ | ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ

ಪಿಟಿಐ
Published 15 ಮೇ 2023, 15:52 IST
Last Updated 15 ಮೇ 2023, 15:52 IST
ಸಮೀರ್‌ ವಾಂಖೆಡೆ 
ಸಮೀರ್‌ ವಾಂಖೆಡೆ    

ನವದೆಹಲಿ: ‘ಆರ್ಯನ್‌ ಖಾನ್‌ನನ್ನು ಡ್ರಗ್ಸ್‌ ಪ್ರಕರಣದಿಂದ ಬಿಡುಗಡೆಗೊಳಿಸಲು ಆತನ ತಂದೆ, ಬಾಲಿವುಡ್ ನಟ ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಹಣ ಕೊಡದಿದ್ದರೆ ಆರ್ಯನ್‌ನನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಲಾಗಿತ್ತು’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ’ ಎಂದು ಹೇಳಿದ್ದಾರೆ. 

ಎನ್‌ಸಿಬಿಯ ವಿಶೇಷ ತನಿಖಾ ತಂಡ (ಎಸ್‌ಇಟಿ) ನಡೆಸಿದ್ದ ವಿಚಾರಣೆ ವೇಳೆ ಸಮೀರ್‌ ಅವರು ತಾವು ಕೈಗೊಂಡಿದ್ದ ವಿದೇಶಿ ಪ್ರವಾಸದ ಬಗ್ಗೆ ಸೂಕ್ತ ವಿವರಣೆ ನೀಡಿರಲಿಲ್ಲ. ಖರ್ಚು–ವೆಚ್ಚದ ಕುರಿತು ಸಮರ್ಪಕವಾದ ಲೆಕ್ಕ ಕೊಟ್ಟಿರಲಿಲ್ಲ. ಹೀಗಾಗಿ ಸಿಬಿಐ ಇದೇ 11 ರಂದು ಸಮೀರ್‌ ಹಾಗೂ ಇತರ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು.  

ADVERTISEMENT

‘ವಾಂಖೆಡೆ ಅವರು ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದರು. ಇದಕ್ಕಾಗಿ ವ್ಯಯಿಸಲಾಗಿರುವ ಹಣದ ಮೂಲದ ಕುರಿತು ಅವರು ನಿಖರ ಮಾಹಿತಿ ಒದಗಿಸಿಲ್ಲ. ದುಬಾರಿ ಮೌಲ್ಯದ ಕೈಗಡಿಯಾರದ ಖರೀದಿ ಹಾಗೂ ಮಾರಾಟದಲ್ಲೂ ತೊಡಗಿಕೊಂಡಿದ್ದರು. ಈ ಕುರಿತು ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸಂಸ್ಥೆಗೆ ಯಾವುದೇ ಮಾಹಿತಿ ಒದಗಿಸಿರಲಿಲ್ಲ’ ಎಂದು ತಿಳಿಸಲಾಗಿದೆ. 

‘ಕೆ.ಪಿ.ಗೋಸಾವಿ, ಆತನ ಸಹಚರ ಸಾನ್ವಿಲ್‌ ಡಿಸೋಜ ಹಾಗೂ ಇತರರು ಆರ್ಯನ್‌ ಕುಟುಂಬದವರ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಅದನ್ನು ₹18 ಕೋಟಿಗೆ ಇಳಿಸಿದ್ದರು. ಮುಂಗಡವಾಗಿ ₹50 ಲಕ್ಷ ಪಡೆದಿದ್ದ ಇವರು ಕ್ರಮೇಣ ಒಂದಷ್ಟು ಮೊತ್ತವನ್ನು ಶಾರುಖ್‌ ಕುಟುಂಬಕ್ಕೆ ಹಿಂದಿರುಗಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

‘2021ರ ಅಕ್ಟೋಬರ್‌ 2ರಂದು ಐಷಾರಾಮಿ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್‌ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ, ಆರ್ಯನ್‌ ಸೇರಿದಂತೆ ಅನೇಕರನ್ನು ಬಂಧಿಸಿತ್ತು. ಬಳಿಕ ಗೋಸಾವಿಯ ಖಾಸಗಿ ವಾಹನದಲ್ಲೇ ಅವರನ್ನೆಲ್ಲಾ ಎನ್‌ಸಿಬಿ ಕಚೇರಿಗೆ ಕರೆತರಲಾಗಿತ್ತು. ತಮಗೆ ಪರಿಚಿತರಾಗಿದ್ದ ಗೋಸಾವಿ ಹಾಗೂ ಪ್ರಭಾಕರ್ ಸೈಲ್‌ ಎಂಬುವರನ್ನು ಪ್ರಕರಣದ ಪ್ರತ್ಯಕ್ಷ ಸಾಕ್ಷ್ಯಗಳನ್ನಾಗಿ ಹೆಸರಿಸುವಂತೆ ಅಧಿಕಾರಿಗಳಿಗೆ ಸಮೀರ್‌ ಅವರೇ ನಿರ್ದೇಶನ ನೀಡಿದ್ದರು. ಆರೋಪಿಗಳ ವಿಚಾರಣೆಯ ಹೊಣೆಯನ್ನು ಗೋಸಾವಿಗೆ ವಹಿಸುವಂತೆ ಎನ್‌ಸಿಬಿಯ ಆಗಿನ ಅಧೀಕ್ಷಕ ವಿ.ವಿ.ಸಿಂಗ್‌ ಅವರಿಗೆ ವಾಂಖೆಡೆ ಸೂಚಿಸಿದ್ದರು’ ಎಂದು ಹೇಳಲಾಗಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.