ಮುಂಬೈ: 'ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಜತೆಗೂಡಿ ಸರ್ಕಾರ ರಚನೆಗೆ ಸಿದ್ಧರಿದ್ದೇವೆ. ಕೆಲವು ಎನ್‌ಸಿಪಿ ಸದಸ್ಯರಷ್ಟೇ ಅಜಿತ್ ಪವಾರ್ ಜತೆಯಲ್ಲಿದ್ದಾರೆ' ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಶನಿವಾರ ದಿಢೀರ್ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವಿಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು. ಮಹಾಮೈತ್ರಿ ಮೂಲಕ ಸರ್ಕಾರ ರಚನೆ ಪ್ರಯತ್ನದಲ್ಲಿದ್ದ ಎನ್‌ಸಿಪಿ, ಶಿವಸೇನಾ ಮುಖಂಡರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಆದರೆ, ಕಾಂಗ್ರೆಸ್‌ನ ಮುಖಂಡರು ಭಾಗಿಯಾಗಲಿಲ್ಲ.
'ಕರೆ ಮಾಡಿದ ಅಜಿತ್ ಪವಾರ್, ಯಾವುದೋ ವಿಷಯ ಚರ್ಚಿಸುವುದಿದೆ ಎಂದು ಹೇಳಿ ಇತರೆ ಶಾಸಕರೊಂದಿಗೆ ನನ್ನನ್ನು ರಾಜ ಭವನಕ್ಕೆ ಕರೆದುಕೊಂಡು ಹೋದರು. ನಮ್ಮ ತಿಳಿವಳಿಕೆಗೆ ಬರುವಷ್ಟರಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣಗೊಂಡಿತ್ತು. ಕೂಡಲೇ ನಾನು ಶರದ್ ಪವಾರ್ ಅವರ ಬಳಿಕ ಓಡಿದೆ, ನಾನು ಅವರೊಂದಿಗೆ ಮತ್ತು ಎನ್‌ಸಿಪಿ ಜತೆಗೆ ಇರುವುದಾಗಿ ಹೇಳಿದೆ' ಎಂದು ಶಾಸಕ ರಾಜೇಂದ್ರ ಶಿಂಗಾನೆ ಹೇಳಿಕೊಂಡರು.
'ಎನ್‌ಸಿಪಿ 54, ಕಾಂಗ್ರೆಸ್ 44, ಶಿವಸೇನಾ 56 ಹಾಗೂ ಸ್ವತಂತ್ರ ಅಭ್ಯರ್ಥಿಗಳ, ಇತರೆ ಶಾಸಕರೂ ಜತೆಗಿದ್ದೇವೆ. ಪಕ್ಷದ ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ, ಅವರು ಯಾರೂ ಸಹ ಅಜಿತ್ ಪವಾರ್ ಜತೆಗೆ ಹೋಗುವುದಿಲ್ಲ. ಬಿಜೆಪಿಗೆ ಬೆಂಬಲ ನೀಡಿರುವುದು ಅಜಿತ್ ಪವಾರ್ ವೈಯಕ್ತಿಕ ಮತ್ತು ಸ್ವಂತ ನಿರ್ಧಾರವಾಗಿದೆ. 10 ರಿಂದ 11 ಶಾಸಕರು ಅಜಿತ್ ಪವಾರ್ ಕಡೆಗೆ ಇರುವುದಾಗಿ ಮಾಹಿತಿ ದೊರೆತಿದೆ' ಎಂದು ಶರದ್ ಪವಾರ್ ಬಹಿರಂಗ ಪಡಿಸಿದರು.
'ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ರಚನೆಗೆ ನಾವು ಮತ್ತೆ ಪ್ರಯತ್ನಿಸುತ್ತೇವೆ' ಎಂದು ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜಭವನದಲ್ಲಿ ಮುಖ್ಯವಾದ ಸಭೆ ಇರುವುದಾಗಿ ಧನಂಜಯ್ ಮುಂಢೆ ನನ್ನನ್ನು ಆಹ್ವಾನಿಸಿದರು ಎಂದು ಎನ್‌ಸಿಪಿ ಶಾಸಕರೊಬ್ಬರು ಹೇಳಿದರು.
ಅಜಿತ್ ಪವಾರ್ ಕರೆ ಮಾಡಿ ಕೆಲವು ಶಾಸಕರನ್ನು ರಾಜಭವನಕ್ಕೆ ಆಹ್ವಾನಿಸಿರುವುದಾಗಿಯೂ ಶಾಸಕರು ಹೇಳಿಕೊಂಡರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿದ್ದ ಶಾಸಕರ ಪೈಕಿ ಮೂವರು ಮರಳಿದ್ದಾರೆ, ಇನ್ನೂ ಕೆಲವರು ಬರುವವರಿದ್ದಾರೆ ಎಂದು ತಿಳಿಸಿದರು.
'ಅಜಿತ್ ಪವಾರ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಸಂಜೆ ಆಯ್ಕೆ ಮಾಡಲಾಗುತ್ತದೆ‘ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರಾದ್ ಪವಾರ್ ಜತೆಗೆ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್, ಶಿವಸೇನಾದ ಉದ್ಧವ್ ಠಾಕ್ರೆ, ಅವರ ಪುತ್ರ ಆದಿತ್ಯಾ, ಮುಖಂಡರಾದ ಸಂಜಯ್ ರಾವುತ್, ಅನಿಲ್ ದೇಸಾಯಿ, ಸುಭಾಷ್ ದೇಸಾಯಿ ಮತ್ತು ಅನಿಲ್ ಪರಾಬ್ ಜತೆಯಾಗಿ ಮಾಧ್ಯಮ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.