ನವದೆಹಲಿ: 2012ರಲ್ಲಿ ತಮ್ಮ ಪುತ್ರಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಶೀಘ್ರವೇ ಗಲ್ಲಿಗೇರಿಸಬೇಕು ಎಂದು ನಿರ್ಭಯಾ ಪೋಷಕರು ಮನವಿ ಮಾಡಿರುವ ಅರ್ಜಿ ವಿಚಾರಣೆ ಶೀಘ್ರವೇ ಸಾಧ್ಯವಿಲ್ಲ ಎಂದು ದೆಹಲಿ ನ್ಯಾಯಾಲಯ ತಿಳಿಸಿದೆ.
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳಲ್ಲೊಬ್ಬರು ತಮ್ಮ ಮೇಲಿನ ಮರಣದಂಡನೆಯನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅದಕ್ಕಿಂತ ಮೊದಲು ಗಲ್ಲಿಗೇರಿಸುವ ಪ್ರಕ್ರಿಯೆ ಚುರುಕುಗೊಳಿಸುವ ಈ ಅರ್ಜಿ ವಿಚಾರಣೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ. ಈ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 18ರಂದು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
2012ರ ಡಿಸೆಂಬರ್ 16 ರಂದು ಚಲಿಸುತ್ತಿದ್ದ ಬಸ್‌ನಲ್ಲಿ ನಿರ್ಭಯಾಳನ್ನು ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಹೀಗಾಗಿ ಈ ವರ್ಷದ ಡಿಸೆಂಬರ್ 16ರಂದೇ ಅಪರಾಧಿಗಳನ್ನು ಗಲ್ಲಿಗೇರಿಸಬೇಕು.ಆದಷ್ಟು ಬೇಗ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್ ಮತ್ತು ಸರ್ಕಾರಕ್ಕೆ ನಿರ್ಭಯಾ ತಾಯಿ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ನಿರ್ಭಯಾ: ಹಂತಕರ ಗಲ್ಲಿಗೆ ಸಿದ್ಧತೆ?
ಸುಪ್ರೀಂ ಕೋರ್ಟ್ ಅಪರಾಧಿಗಳೆಂದು ತೀರ್ಪು ನೀಡಿ ಇಂದಿಗೆ ಎರಡೂವರೆ ವರ್ಷಗಳು ಕಳೆದಿವೆ ಮತ್ತು 18 ತಿಂಗಳಿಂದಲೂ ಅವರ ಮರುಪರಿಶೀಲನಾ ಅರ್ಜಿಗಳು ತಿರಸ್ಕೃತವಾಗಿವೆ. ಕೂಡಲೇ ಅಪರಾಧಿಗಳನ್ನು ನೇಣಿಗೇರಿಸಿ ಎಂದು ನ್ಯಾಯಾಲಯ ಮತ್ತು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ನಿರ್ಭಯಾ ತಾಯಿಹೇಳಿದ್ದಾರೆ.
ಪ್ರಕರಣದಲ್ಲಿ ಆರು ಜನರನ್ನು ಅಪರಾಧಿಗಳನ್ನಾಗಿ ತೀರ್ಮಾನಿಸಲಾಗಿತ್ತು. ಇವರಲ್ಲೊಬ್ಬ ಅಪ್ರಾಪ್ತ ಜೈಲು ಶಿಕ್ಷೆಯನ್ನು ಅನುಭವಿಸಿ ನಂತರ ಬಿಡುಗಡೆಯಾಗಿದ್ದರೆ, ಮತ್ತೊಬ್ಬ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದನು. ಉಳಿದ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು.
ಅಪರಾಧಿಗಳಲ್ಲೊಬ್ಬನಾದ ವಿನಯ್ ಶರ್ಮಾ ಎಂಬಾತ ರಾಷ್ಟ್ರಪತಿಗಳ ಮುಂದಿದ್ದ ಕ್ಷಮಾಪಣೆ ಮನವಿಯನ್ನು ಕಳೆದ ವಾರ ಹಿಂಪಡೆದಿದ್ದರು. ಬಳಿಕ ಮತ್ತೋರ್ವ ಅಕ್ಷಯ್ ಸಿಂಗ್ ಎಂಬಾತ ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಡಿಸೆಂಬರ್ 17 ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಮುಕೇಶ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾರ ಅರ್ಜಿಗಳನ್ನು ತಿರಸ್ಕರಿಸಿತ್ತು. ಸದ್ಯ ನಾಲ್ವರು ಅಪರಾಧಿಗಳು ತಿಹಾರ್ ಜೈಲಿನಲ್ಲಿದ್ದು, ಗಲ್ಲು ಶಿಕ್ಷೆಗೆ ತಯಾರಿ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.