ಇಂಫಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆಗೆ ಜ.14ರಂದು ಚಾಲನೆ ದೊರೆತಿದ್ದು, ಇದೀಗ ಯಾತ್ರೆ ನಾಗ್‌ಲ್ಯಾಂಡ್‌ಗೆ ತಲುಪಿದೆ.
ಯಾತ್ರೆಯು ಕಾಲ್ನಡಿಗೆ ಮತ್ತು ಬಸ್ ಮೂಲಕ ಸಾಗುತ್ತಿದೆ. ರಾಹುಲ್ ಗಾಂಧಿಯವರು ಪ್ರಯಾಣಿಸುತ್ತಿರುವ ‘ಮೊಹಬ್ಬತ್ ಕಿ ದುಕಾನ್‘ ಬಸ್ ಅನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಈ ಬಸ್‌ನಲ್ಲಿ ಪ್ರಯಾಣಿಸಬೇಕೆಂದುಕೊಂಡವರಿಗೆ ವಿಶೇಷ ಟಿಕೆಟ್ ಅನ್ನು ಕೊಡಲು ಪಕ್ಷ ನಿರ್ಧರಿಸಿದೆ.
ವಿಶೇಷ ಟಿಕೆಟ್ ಬಗ್ಗೆ ಮಾಹಿತಿ ನೀಡಿರುವ ಹಿರಿಯ ನಾಯಕ ಜೈರಾಮ್ ರಮೇಶ್, ಟಿಕೆಟ್‌ನ ಫೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಚಿತ್ರ ಮತ್ತು ಅವರ ಸಹಿಯನ್ನು ಈ ವಿಶೇಷ ಟಿಕೆಟ್ ಹೊಂದಿದೆ.
‘ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿರುವ ‘ಮೊಹಬ್ಬತ್ ಕಿ ದುಕಾನ್‘ ಬಸ್ಸಿನ ಟಿಕೆಟ್ ಇದಾಗಿದೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತನಾಡಲು ಬಯಸುವವರಿಗೆ ಈ ಟಿಕೆಟ್ ನೀಡಲಾಗುತ್ತದೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈಗೊಂಡ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ‘ಮೊಹಬ್ಬತ್ ಕಿ ದುಕಾನ್ ಇನ್ ನಫ್ರತ್ ಕಾ ಬಜಾರ್’(ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಎಂಬ ಮಾತನ್ನು ಹೇಳಿದ್ದರು. ಈ ಮಾತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ರಾಹುಲ್ ಗಾಂಧಿ ಅವರಿಗಾಗಿಯೇ ವಿನ್ಯಾಸ ಮಾಡಿರುವ ವೋಲ್ವೊ ಬಸ್‌ಗೆ ‘ಮೊಹಬ್ಬತ್ ಕಿ ದುಕಾನ್’ ಎಂದು ಹೆಸರಿಡಲಾಗಿದೆ. ಈ ಬಸ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಜನರೊಂದಿಗೆ ಸಂವಹನ ಮಾಡಲು ಅನುಕೂಲವಾಗುವಂತೆ ಹೈಡ್ರಾಲಿಕ್ ಲಿಫ್ಟ್ ಅನ್ನು ಅಳವಡಿಸಲಾಗಿದೆ.
ನ್ಯಾಯ ಯಾತ್ರೆ ಸೋಮವಾರ ಸಂಜೆ ನಾಗಾಲ್ಯಾಂಡ್ ತಲುಪಿದ್ದು, ರಾಹುಲ್ ಗಾಂಧಿ ಮತ್ತು ಪಕ್ಷದ ಕಾರ್ಯಕರ್ತರು ಮಣಿಪುರದ ಗಡಿ ಜಿಲ್ಲೆ ಕೊಹಿಮಾದ ಖುಜಾಮಾ ಗ್ರಾಮಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು.
ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿದ್ದು, 6,713 ಕಿ.ಮೀ. ಕ್ರಮಿಸಲಿದೆ. ಮಾರ್ಚ್ 20 ಅಥವಾ 21ರಂದು ಯಾತ್ರೆ ಮುಂಬೈನಲ್ಲಿ ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.