ನವದೆಹಲಿ: ‘ನನಗೆ ಸಾಯಲು ಇಷ್ಟವಿಲ್ಲ, ನನ್ನನ್ನು ಈ ಸ್ಥಿತಿಗೆ ತಂದ ಆರೋಪಿಗಳನ್ನು ಗಲ್ಲಿಗೇರಿಸುವುದನ್ನು ನೋಡಬೇಕು...,’
ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವ್ ಸಾಮೂಹಿಕ ಅತ್ಯಾಚಾರಸಂತ್ರಸ್ತೆಯು ಐಸಿಯುಗೆ ಹೋಗುವ ಮುನ್ನ ತನ್ನ ಅಣ್ಣನೊಂದಿಗೆ ಆಡಿದ ಕೊನೆಯ ಮಾತುಗಳಿವು.
‘ಅಣ್ಣ ನನ್ನನ್ನು ಉಳಿಸು, ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ನನ್ನ ಈ ಸ್ಥಿತಿಗೆ ಕಾರಣರಾದವರು ಗಲ್ಲು ಶಿಕ್ಷೆ ಅನುಭವಿಸುವುದನ್ನು ನಾನು ನೋಡಬೇಕು ಎಂದು ನನ್ನ ತಂಗಿ ಸಂಕಟಪಡುತ್ತಾ ಹೇಳುತ್ತಿದ್ದಳು’ ಎಂದು ಸಂತ್ರಸ್ತೆ ಅಣ್ಣ ಮಾಧ್ಯಮಗಳಿಗೆಹೇಳಿದರು.
ಅತ್ಯಾಚಾರ ಪ್ರಕರಣ ವಿಚಾರಣೆಗಾಗಿ ಗುರುವಾರ ಬೆಳಿಗ್ಗೆ ರಾಯಬರೇಲಿ ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಐವರು ದುಷ್ಕರ್ಮಿಗಳು ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು. ಶೇಕಡ 90ರಷ್ಟು ಸುಟ್ಟ ಗಾಯಗಳಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಲಖನೌದ ಶ್ಯಾಮ್ ಪ್ರಸಾದ್ ಮುಖರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸಂಜೆ ಹೊತ್ತಿಗೆ ಏರ್ ಆಂಬುಲೆನ್ಸ್ ಮೂಲಕ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.
ಶುಕ್ರವಾರ ಸಂಜೆ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿದ್ದು,ರಾತ್ರಿ 11.10ಕ್ಕೆ ಹೃದಯಾಘಾತವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ 11.40ಕ್ಕೆ ಅವರು ಕೊನೆಯುಸಿರೆಳೆದರು.
ಕಳೆದ ಡಿಸೆಂಬರ್‌ನಲ್ಲಿ ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿತ್ತು. ಶಿವರಾಂ ತ್ರಿವೇದಿ ಮತ್ತು ಶುಭಂ ತ್ರಿವೇದಿ ಎಂಬ ಆರೋಪಿಗಳು ಈ ಕೃತ್ಯ ಎಸಗಿದ್ದರು. ಮಾರ್ಚ್‌ನಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.