ನವದೆಹಲಿ: 'ಮೋಸ್ಟ್ ವಾಂಟೆಡ್' ಖಾಲಿಸ್ತಾನಿ ಭಯೋತ್ಪಾದಕ, 'ಖಾಲಿಸ್ತಾನಿ ಟೈಗರ್ ಫೋರ್ಸ್'ನ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೆನಡಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಭಾನುವಾರ ರಾತ್ರಿ 8:27ರ(ಸ್ಥಳೀಯ ಕಾಲಮಾನ) ವೇಳೆ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ. ಕೆನಡಾದ ಸರ್ರೆ ನಗರದ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ನಿಜ್ಜರ್ ಶವವಾಗಿ ಪತ್ತೆಯಾಗಿದ್ದಾನೆ.
ಹರ್ದೀಪ್ ಸಿಂಗ್ ನಿಜ್ಜರ್ ಪಂಜಾಬ್‌ನ ಜಲಂಧರ್‌ನ ಭರ್ಸಿಂಗ್‌ಪುರ ಗ್ರಾಮದ ನಿವಾಸಿ.
ಅಪರಿಚಿತ ವ್ಯಕ್ತಿಗಳಿಬ್ಬರು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ವರದಿ ತಿಳಿಸಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿರೋಧಿಸಿ ಖಾಲಿಸ್ತಾನಿ ಪರ ಹೋರಾಟಗಾರರು ‘ಭಾರತ ವಿರೋಧಿ ಘೋಷಣೆ‘ ಕೂಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಜ್ಜರ್ ಮೇಲೆ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಪಟ್ಟಂತೆ ಹಲವು ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ನಡೆದ ಹಿಂದೂ ಅರ್ಚಕರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ನಿಜ್ಜರ್ ಅವರ ಮೇಲೆ ಗಂಭೀರ ಪ್ರಕರಣ ದಾಖಲಿಸಿತ್ತು. ಅಲ್ಲದೇ ನಿಜ್ಜರ್ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ ಘೋಷಿಸಿತ್ತು.
ಖಾಲಿಸ್ತಾನಿ ಪರ ಸಂಘಟನೆ ‘ಸಿಖ್ ಫಾರ್ ಜಸ್ಟೀಸ್‘ ನ ಪ್ರಚಾರಕನಾಗಿಯೂ ನಿಜ್ಜರ್ ಕೆಲಸ ಮಾಡುತ್ತಿದ್ದನು.
ನಾಲ್ಕು ದಿನದ ಹಿಂದೆ ಭಾರತೀಯ ಹೈಕಮಿಷನ್ ದಾಳಿಯಲ್ಲಿ ಭಾಗಿಯಾಗಿದ್ದ ಖಾಲಿಸ್ತಾನಿ ಪರ ಕಾರ್ಯಕರ್ತ ಅವತಾರ್ ಸಿಂಗ್ ರಕ್ತದ ಕ್ಯಾನ್ಸರ್‌ನಿಂದ ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.