ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರದ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು, ಮಸೂದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮರು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಶಿಫಾರಸು ಮಾಡುತ್ತಿರುವುದಾಗಿ ಘೋಷಿಸಿದರು.
ಇದರ ಜೊತೆಗೆ ಮುಸಲ್ಮಾನ್ ವಕ್ಫ್ ರದ್ದು ಮಸೂದೆ 2024 ಅನ್ನೂ ಅವರು ಮಂಡಿಸಿದರು.
1955ರ ತಿದ್ದುಪಡಿ ಮಸೂದೆ ಜಾರಿಗೆ ಬರುವುದರಿಂದ 1923ರ ಮುಸಲ್ಮಾನ್ ವಕ್ಫ್ ಕಾಯ್ದೆ ರದ್ದು ಮಾಡುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ತಿದ್ದುಪಡಿ ಕಾಯ್ದೆ ಸಂಬಂಧ ಮುಸಲ್ಮಾನರ ದಾರಿತಪ್ಪಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳನ್ನು ಟೀಕಿಸಿದ ಅವರು, ಸದ್ಯ ಇರುವ ಕಾಯ್ದೆಯಲ್ಲಿ ಹಲವು ತಪ್ಪುಗಳು ಇರುವುದರಿಂದ ಕಾಯ್ದೆಯ ಅದರ ಉದ್ದೇಶ ಪೂರೈಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಈ ಮಸೂದೆಯು ವಕ್ಫ್ ಕಾಯಿದೆ, 1995ರಲ್ಲಿ ದೂರಗಾಮಿ ಬದಲಾವಣೆಗಳನ್ನು ತರುತ್ತದೆ. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದು ಸೇರಿದಂತೆ ಕೆಲ ಬದಲಾವಣೆಗೆ ಉದ್ದೇಶಿಸಲಾಗಿದೆ ಎಂದು ವರದಿ ತಿಳಿಸಿದೆ.
ವಕ್ಫ್ ತಿದ್ದುಪಡಿ ಮಸೂದೆಯು ಕಾಯ್ದೆಗೆ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ 1995 ಎಂದು ಮರುನಾಮಕರಣಮಾಡುವ ಉದ್ದೇಶವನ್ನೂ ಹೊಂದಿದೆ.
ಮಂಗಳವಾರ ರಾತ್ರಿಯೇ ಸದನದ ಸದಸ್ಯರಿಗೆ ಮಸೂದೆಯ ಪ್ರತಿಯನ್ನು ಹಂಚಲಾಗಿತ್ತು.
ಮಸೂದೆ ಮಂಡನೆಗೆ ರಿಜಿಜು ಅನುಮತಿ ಕೇಳುತ್ತಿದ್ದಂತೆ ಮಸೂದೆ ವಿರೋಧಿಸಿ ವಿಪಕ್ಷಗಳ ಹಲವು ನಾಯಕರು ನೋಟಿಸ್ ನೀಡಿದರು. ಉದ್ದೇಶಿತ ಮಸೂದೆಯು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದು ಅವರು ಆರೋಪಿಸಿದರು.
ವಿರೋಧ ಪಕ್ಷಗಳ ವಿರೋಧಕ್ಕೆ ಪ್ರತಿಕ್ರಿಯಿಸಿದ ರಿಜಿಜು, ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವ ಅಂಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಂವಿಧಾನದ ಯಾವುದೇ ಅಂಶದ ಉಲ್ಲಂಘನೆಯಾಗಿಲ್ಲ ಎಂದು ಹೇಳಿದರು.
ಅಲ್ಲದೆ, 1955ರ ವಕ್ಫ್ ಕಾಯ್ದೆ ಬಗ್ಗೆ ಮರುಪರಿಶೀಲಿಸಬೇಕೆಂದು ಜಂಟಿ ಸದನ ಸಮಿತಿಯೇ ಶಿಫಾರಸು ಮಾಡಿದೆ. ಆದರೆ, ವಿಪಕ್ಷಗಳು ಈ ಸಂಬಂದ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು.
ವಿಪಕ್ಷಗಳು ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ತಪ್ಪು ಮಾಹಿತಿ ನೀಡಿ ಜನರ ದಾರಿತಪ್ಪಿಸುತ್ತಿವೆ ಎಂದೂ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.