ನವದೆಹಲಿ: ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಂಗಳವಾರ ಇಲ್ಲಿ ನಡೆದ ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸದನ ಸಮಿತಿ ಸಭೆಯಲ್ಲಿ ನೀರಿನ ಗಾಜಿನ ಶೀಸೆ ಒಡೆದು ಅಧ್ಯಕ್ಷರ ಪೀಠದತ್ತ ಎಸೆದರು ಎಂದು ಮೂಲಗಳು ತಿಳಿಸಿವೆ.
ಸಮಿತಿ ಸಭೆಯು ಅನುಚಿತ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು ಬ್ಯಾನರ್ಜಿ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ.
ಒಂದು ಹಂತದಲ್ಲಿ ವಾಗ್ವಾದ ಅತಿರೇಕಕ್ಕೆ ಹೋದಾಗ ಬ್ಯಾನರ್ಜಿ ಅವರು ಗಾಜಿನ ಶೀಸೆ ಒಡೆದು ಅಧ್ಯಕ್ಷ ಬಿಜೆಪಿಯ ಜಗದಾಂಬಿಕಾ ಪಾಲ್‌ರತ್ತ ಎಸೆದರು. ಈ ಘಟನೆಗೆ ಮುನ್ನ ಮಾಜಿ ನ್ಯಾಯಮೂರ್ತಿ,ಬಿಜೆಪಿ ಸದಸ್ಯ ಅಭಿಜಿತ್ ಗಂಗೋಪಾಧ್ಯಾಯ ಜೊತೆ ಬಿಸಿ ಚರ್ಚೆನಡೆದಿತ್ತು.
ಗಾಜಿನ ಶೀಸೆಯನ್ನು ಕೋಪದಿಂದ ಒಡೆದ ಸಂದರ್ಭದಲ್ಲಿ ಬ್ಯಾನರ್ಜಿ ಅವರ ಕಿರುಬೆರಳಿಗೂ ಗಾಯವಾಗಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಮೂಲಗಳ ಪ್ರಕಾರ, ಸಭೆಯಿಂದ ಬ್ಯಾನರ್ಜಿ ಅಮಾನತುಪಡಿಸಲು ಕೋರಿ ಬಿಜೆಪಿಯ ಸದಸ್ಯ ನಿಶಿಕಾಂತ್ ದುಬೆ ಅವರು ಮಂಡಿಸಿದ ನಿರ್ಣಯ ಕುರಿತು 9–8 ಮತಗಳು ಬಂದವು. ಸಭೆಯ ನಂತರ ಘಟನೆ ಕುರಿತು ಸುದ್ದಿಗಾರರ ಜೊತೆಗೆ ಚರ್ಚಿಸಲು ಬ್ಯಾನರ್ಜಿ ನಿರಾಕರಿಸಿದರು.
ಪ್ರಾಥಮಿಕ ಚಿಕಿತ್ಸೆ ಬಳಿಕ ಬ್ಯಾನರ್ಜಿ ಅವರನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಸಭಾ ಕೊಠಡಿಗೆ ಕರೆದೊಯ್ದರು.
ಮಸೂದೆ ಬಗ್ಗೆ ಒಡಿಶಾದ ಎರಡು ಸಂಘಟನೆಗಳ ಅಭಿಪ್ರಾಯಗಳನ್ನು ಸಮಿತಿ ಆಲಿಸುತ್ತಿದೆ. ಸಂಘಟನೆಗಳಲ್ಲಿ ನಿವೃತ್ತ ನ್ಯಾಯಮೂರ್ತಿಗಳು, ವಿರೋಧ ಪಕ್ಷದ ಸದಸ್ಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.