ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯರ ಶಿಕ್ಷಣ ಹಾಗೂ ಜನಸಂಖ್ಯಾ ನಿಯಂತ್ರಣ ವಿಚಾರವಾಗಿ ಆಡಿದ ಮಾತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಮತ್ತು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರ ನಡುವೆ ಮಾತಿನ ಜಟಾಪಟಿ ನಡೆದಿದೆ.
ನಿತೀಶ್ ಅವರು ಕ್ಷಮೆ ಯಾಚಿಸಬೇಕು ಎಂದು ರೇಖಾ ಅವರು ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಆಗ್ರಹಿಸಿದರು. ತಮ್ಮ ಪೋಸ್ಟ್‌ನಲ್ಲಿ ಅವರು ಪ್ರಿಯಾಂಕಾ ಸೇರಿದಂತೆ ಹಲವರ ಹೆಸರು ಟ್ಯಾಗ್ ಮಾಡಿ, ಅವರೂ ನಿತೀಶ್ ಕ್ಷಮೆಗೆ ಆಗ್ರಹಿಸಬೇಕು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ, ಕೆಲವು ವಿಷಯಗಳಲ್ಲಿ ಮೌನವಾಗಿರುವುದು ಹಾಗೂ ಕೆಲವು ವಿಷಯಗಳಲ್ಲಿ ಮಾತ್ರ ಮಾತನಾಡುವ ಮೂಲಕ ರೇಖಾ ಅವರು ತಮ್ಮ ಸ್ಥಾನಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದರು. ‘ಮಹಿಳೆಯ ಬಗ್ಗೆ ನಿಂದನಾತ್ಮಕವಾಗಿ ಯಾರೇ ಮಾತನಾಡಿದರೂ ನಾನು ಖಂಡಿಸುತ್ತೇನೆ... ಆದರೆ ನೀವು (ರೇಖಾ) ಕೆಲವು ವಿಷಯಗಳಲ್ಲಿ ಮಾತ್ರ ಮಾತನಾಡುತ್ತೀರಿ, ಇನ್ನು ಕೆಲವು ವಿಷಯಗಳಲ್ಲಿ ಮೌನವಾಗಿರುತ್ತೀರಿ’ ಎಂದು ಪ್ರಿಯಾಂಕಾ ತಿರುಗೇಟು ನೀಡಿದರು.
ಇದಕ್ಕೆ ಪ್ರತ್ಯುತ್ತರ ಬರೆದ ರೇಖಾ, ‘ಹಿಂದೊಮ್ಮೆ ನಿಮ್ಮ ಪಕ್ಷದಲ್ಲಿದ್ದ ನಾಯಕರೊಬ್ಬರ ವಿಚಾರದಲ್ಲಿ ನೀವು ಹೇಗೆ ಅಸಹಾಯಕತೆ ತೋರಿಸಿದ್ದಿರಿ ಎಂಬುದು ನೆನಪಿದೆಯೇ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಪ್ರಶ್ನಿಸಿದರು. ‘ಅವರು ಮಾಡಿದ್ದಕ್ಕೆ ನಾನು ಎಲ್ಲ ದಾಖಲೆಗಳನ್ನು ತೋರಿಸಿದ್ದೆ. ಆದರೆ ಆಗ ನೀವು ಅದೆಷ್ಟರಮಟ್ಟಿಗೆ ನಿಷ್ಪಕ್ಷಪಾತಿ ಆಗಿದ್ದಿರಿ, ನೆನಪಿದೆಯೇ’ ಎಂದು ಕೇಳಿದರು.
‘ಆ ವ್ಯಕ್ತಿಯ ಕುರಿತ ಆರೋಪಗಳನ್ನು ಬಹಿರಂಗಪಡಿಸಬೇಕು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಆ ವಿಚಾರವಾಗಿ ಮುಂದಡಿ ಇರಿಸಬೇಕು ಎಂದು ಪಾರದರ್ಶಕತೆಯ ದೃಷ್ಟಿಯಿಂದ ನಾನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಒತ್ತಾಯಿಸುತ್ತೇನೆ... ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ತೋರಿಸಿ, ಅಗತ್ಯ ಕ್ರಮ ಕೈಗೊಳ್ಳಿ, ಟ್ರೋಲ್ ಆಗಬೇಡಿ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.