ಲಖನೌ: ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ವಿಡಿಯೊ ಚಿತ್ರೀಕರಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವರದಿಯಾಗಿದೆ. ಮಹಿಳೆಗೆ ಡ್ರೆಸ್ಸಿಂಗ್ ಮಾಡುವ ಮುನ್ನ ಈ ಕೃತ್ಯವೆಸಗಿರುವ ವಾರ್ಡ್ ಬಾಯ್, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ.
ವಿಡಿಯೊ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ವಿಕ್ಕಿ ಎಂದು ಗುರುತಿಸಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು, ಆಸ್ಪತ್ರೆ ಮೇಲೆ ದಾಳಿ ಮಾಡಿ ಬೀಗ ಜಡಿದಿದ್ದಾರೆ. ಪರವಾನಗಿಯನ್ನೂ ರದ್ದು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ, ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಮತ್ತೆ ಆಸ್ಪತ್ರೆಗೆ ಹೋಗಿದ್ದರು. ಆಗ ಅವರನ್ನು ಆಪರೇಷನ್ ಥಿಯೇಟರ್‌ಗೆ (ಒಟಿ) ಕರೆದೊಯ್ದ ವಾರ್ಡ್ ಬಾಯ್, ಅಕ್ರಮವಾಗಿ ವಿವಸ್ತ್ರಗೊಳಿಸಿ ಡ್ರೆಸ್ಸಿಂಗ್ ಮಾಡಿದ್ದಾನೆ. ಈ ಘಟನೆಯನ್ನು ವಿಡಿಯೊ ಮಾಡಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ. ಅದೇ ಸಂದರ್ಭದ ಚಿತ್ರವೊಂದನ್ನು ವಾಟ್ಸ್‌ಆ್ಯಪ್‌ನ ಡಿಸ್ಪ್ಲೇ ಪಿಕ್ಚರ್‌ಆಗಿಯೂ ಹಾಕಿಕೊಂಡಿದ್ದ' ಎಂದು ವರದಿಯಾಗಿದೆ.
'ವಿಡಿಯೊ ಹಳೆಯದ್ದು. ಆದರೆ, ಅದು ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಈ ಸಂಬಂಧ ತನಿಖೆ ಆರಂಭಿಸಿದ್ದೇವೆ' ಎಂದು ಬಸ್ತಿ ಮುಖ್ಯ ಆರೋಗ್ಯ ಅಧಿಕಾರಿ (ಸಿಎಂಒ) ಡಾ.ರಾಮ್ ಶಂಕರ್ ದುಬೆ ತಿಳಿಸಿದ್ದಾರೆ.
ವಾರ್ಡ್ ಬಾಯ್ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದಾನೆ ಎಂಬ ವರದಿಯನ್ನು ಅಧಿಕಾರಿಗಳು ಇದಕ್ಕೂ ಮೊದಲು ಅಲ್ಲಗಳೆದಿದ್ದರು. ಬಸ್ತಿಯ ಅಧಿಕಾರಿಯೊಬ್ಬರು 'ಡ್ರೆಸ್ಸಿಂಗ್ ಮಾಡುವಂತೆ ವಾರ್ಡ್ ಬಾಯ್‌ಗೆ ತಿಳಿಸಲಾಗಿತ್ತು' ಎಂದಷ್ಟೇ ಹೇಳಿದ್ದರು.
'ನಮ್ಮ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಅವರಲ್ಲಿ ಒಬ್ಬ, ಡ್ರೆಸ್ಸಿಂಗ್ ಮಾಡುವ ಮುನ್ನ ಮಹಿಳೆಯನ್ನು ವಿವಸ್ತ್ರಗೊಳಿಸಿರುವುದು ಹಾಗೂ ಅದನ್ನು ಚಿತ್ರೀಕರಿಸಿರುವ ಸಂಗತಿ ನನಗೆ ತಿಳಿದಿರಲಿಲ್ಲ' ಎಂದು ಆಸ್ಪತ್ರೆಯ ಮಾಲೀಕರು ಹೇಳಿದ್ದಾರೆ.
ಕೋಲ್ಕತ್ತದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಈ ಘಟನೆ ಬೆಳಕಿಗೆ ಬಂದಿರುವುದು ಆಘಾತಕಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.