ಮೀರಠ್: ‘ರಾಮ ಜನ್ಮಭೂಮಿ– ಬಾಬ್ರಿ ಮಸೀದಿ ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪು ನೀಡದಂತೆ ನನ್ನ ಮೇಲೆ ಭಾರಿ ಒತ್ತಡವಿತ್ತು’ ಎಂದು ನಿವೃತ್ತ ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಹೇಳಿದ್ದಾರೆ.
2010ರ ಸೆಪ್ಟೆಂಬರ್ 30ರಂದು ಈ ವಿವಾದಕ್ಕೆ ಸಂಬಂಧಿಸಿ ಮಹತ್ತರ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಪೀಠದಲ್ಲಿದ್ದ ನ್ಯಾಯಾಧೀಶರಲ್ಲಿ ಇವರೂ ಒಬ್ಬರಾಗಿದ್ದರು.
ಮೀರಠ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದ ತೀರ್ಪನ್ನು ಮುಂದೂಡುವಂತೆ ಮನೆಯಿಂದ ಮತ್ತು ಮನೆಯ ಹೊರಗೆ ನನಗೆ ಒತ್ತಡ ಹೇರಲಾಗುತ್ತಿತ್ತು. ಆ ತೀರ್ಪನ್ನು ಆಗ ನೀಡದಿದ್ದರೆ ಬಹುಶಃ ಇನ್ನೂ 200 ವರ್ಷಗಳ ಕಾಲ ಆ ವಿವಾದವನ್ನು ಎಳೆದಾಡಲಾಗುತ್ತಿತ್ತು. ಆ ತೀರ್ಪನ್ನು ಪ್ರಕಟಿಸಿದ ಬಳಿಕ ದೈವಕೃಪೆಗೆ ಒಳಗಾದಂತೆ ಭಾಸವಾಯಿತು’ ಎಂದು ಹೇಳಿದರು.
ಅಯೋಧ್ಯೆಯಲ್ಲಿದ್ದ ವಿವಾದಿತ 2.77 ಎಕರೆ ಭೂಮಿಯನ್ನು ಸುನ್ನಿ ವಖ್ಫ್ ಮಂಡಳಿ, ನಿರ್ಮೋಹಿ ಆಕಾರ ಮತ್ತು ಹಿಂದೂ ಮಹಾಸಭೆ ಪ್ರತಿನಿಧಿಸುವ ರಾಮ್ ಲಲ್ಲಾಗೆ ಸಮನಾಗಿ ಹಂಚಿ ಈ ತೀರ್ಪನ್ನು ನೀಡಲಾಗಿತ್ತು. ಈ ತೀರ್ಪು ನೀಡಿದ್ದ ನ್ಯಾಯಪೀಠದಲ್ಲಿ ಎಸ್.ಯು. ಖಾನ್, ಸುಧೀರ್ ಅಗರ್ವಾಲ್ ಮತ್ತು ಡಿ.ವಿ. ಶರ್ಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.