ನವದೆಹಲಿ: ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ವಿರುದ್ಧದ 2017ರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಕ್ತಾಯ ವರದಿ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಬಿಜೆಪಿ ಸೇರಿ, ಪ್ರಕರಣಕ್ಕೆ ಅಂತ್ಯವಾಡಿ’ ಎಂದು ವ್ಯಂಗ್ಯವಾಡಿದೆ.
ತಮ್ಮ ವಿರುದ್ಧದ ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿ ಹಾಕುವ ಸಲುವಾಗಿಯೇ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಸೇರುತ್ತಿದ್ದಾರೆ ಅಥವಾ ಅದರೊಂದಿಗೆ ಮೈತ್ರಿ ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
‘ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತಿರುವ ಏಜೆನ್ಸಿಗಳ ಪ್ರತಿ ಅಧಿಕಾರಿಯನ್ನೂ ಗಮನಿಸುತ್ತಿರುವುದಾಗಿ’ ಅದು ಎಚ್ಚರಿಸಿದೆ.
ಈ ಸಂಬಂಧ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ಸಾಂಕೇತಿಕವಾಗಿ ‘ಬಿಜೆಪಿ ವಾಷಿಂಗ್ ಮಷಿನ್’ ಹೆಸರು ಅಂಟಿಸಿರುವ ಯಂತ್ರವನ್ನು ಪ್ರದರ್ಶಿಸಿದರು. ಇದು ತತ್ವಗಳನ್ನು ಆಧರಿಸಿ ಕಾರ್ಯನಿರ್ವಹಿಸುವ ‘ಸ್ವಯಂ ಚಾಲಿತವಾಗಿ ವಾಷಿಂಗ್ ಮಷಿನ್’ ಆಗಿದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
‘ಬಿಜೆಪಿಯ ಈ ವಾಷಿಂಗ್ ಮಷಿನ್ ಎಂಥ ಕೊಳಕನ್ನೂ ಸ್ವಚ್ಛಗೊಳಿಸುತ್ತದೆ. ಅದು ಭ್ರಷ್ಟಚಾರವಿರಲಿ, ವಂಚನೆಯ ಕೊಳೆಯೇ ಆಗಿರಲಿ ಶುಚಿಯಾಗಿ ಬಿಡುತ್ತದೆ. ಟಿ–ಶರ್ಟ್‌ನಲ್ಲಿ ಎಂತಹ ಕಲೆಯೇ ಇರಲಿ, ಈ ವಾಷಿಂಗ್ ಮಷಿನ್‌ಗೆ ಹಾಕಿದಾಗ ಅದು ‘ಬಿಜೆಪಿ ಮೋದಿ ವಾಶ್’ ಆಗಿ, ಸ್ವಚ್ಛ ಟೀ–ಶರ್ಟ್ ರೂಪದಲ್ಲಿ ಹೊರ ಬರುತ್ತದೆ ಎಂದು ಅವರು ಎಂದು ಟೀಕಿಸಿದರು.
ಮಷಿನ್ ಬೆಲೆ ₹ 8,500 ಕೋಟಿ
ಅದಾಗ್ಯೂ ಈ ವಾಷಿಂಗ್ ಮಷಿನ್‌ನ ಬೆಲೆ ಬರೋಬ್ಬರಿ ₹8,500 ಕೋಟಿ. ಆಡಳಿತ ಪಕ್ಷವಾದ ಬಿಜೆಪಿಯು ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಹಣದಲ್ಲಿ ಇದನ್ನು ಖರೀದಿಸಿದೆ. ಇದನ್ನು ಬಳಸಿದರೆ ಸಾಕು ಎಲ್ಲ ರೀತಿಯ ಭ್ರಷ್ಟಾಚಾರದ ಕಲೆಗಳು ಪರಿಣಾಮಕಾರಿಯಾಗಿ ಸ್ವಚ್ಛವಾಗಿ ಬಿಡುತ್ತವೆ. ಅಲ್ಲದೆ ಮಾರುಕಟ್ಟೆಯಲ್ಲಿ ಇದಕ್ಕಾಗಿಯೇ ‘ಮೋದಿ ವಾಷಿಂಗ್ ಪೌಡರ್’ ಸಹ ಬಂದಿದೆ ಎಂದು, ಆ ಕುರಿತು ಸಿದ್ಧಪಡಿಸಲಾಗಿರುವ ಕರಪತ್ರವೊಂದನ್ನು ಪ್ರದರ್ಶಿಸಿ, ಎಲ್ಲ ರೀತಿಯ ಕಲೆಗಳನ್ನು ಈ ಪೌಡರ್ ಕ್ಷಣಾರ್ಧದಲ್ಲಿ ತೊಳೆಯುತ್ತದೆ ಎಂದು ಲೇವಡಿ ಮಾಡಿದರು.
ಎನ್‌ಸಿಪಿಯನ್ನು ವಿಭಜಿಸುವ ಮೂಲಕ ಪಟೇಲ್ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟ ಸೇರಿದರು. ಅದಾದ ಕೆಲ ತಿಂಗಳಲ್ಲಿಯೇ, ಅವರ ವಿರುದ್ಧದ 2017ರ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಮುಕ್ತಾಯ ವರದಿ ಸಲ್ಲಿಸಿತು ಎಂದಿರುವ ಖೇರಾ ಅವರು, 2014ರಲ್ಲಿ ಸ್ವತಃ ಬಿಜೆಪಿ ಬಿಡುಗಡೆ ಮಾಡಿದ್ದ ‘ಚಾರ್ಜ್ ಶೀಟ್’ನಲ್ಲಿ ಈ ಪ್ರಕರಣವನ್ನು ಉಲ್ಲೇಖಿಸಲಾಗಿತ್ತು ಎಂದು ಅವರು ತಿಳಿಸಿದರು.
ಈ ಹಗರಣವು ಸುಮಾರು ₹ 25,000 ಕೋಟಿಯಿಂದ ₹ 30,000 ಕೋಟಿಯಷ್ಟು ದೊಡ್ಡದು ಎಂದು ಬಿಜೆಪಿ ಆಗ ಹೇಳಿತ್ತು. ಅಲ್ಲದೆ, ಪಟೇಲ್ ಅವರು 1993ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಇಕ್ಬಾಲ್ ಮಿರ್ಚಿಯೊಂದಿಗೆ ಆಸ್ತಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದೂ ಬಿಜೆಪಿ 2019ರಲ್ಲಿ ಆರೋಪಿಸಿತ್ತು ಎಂದು ಅವರು ಸ್ಮರಿಸಿದರು.
ಕನಿಷ್ಠ 21 ನಾಯಕರು ಸ್ವಚ್ಛವಾಗಿದ್ದಾರೆ:
ಬಿಜೆಪಿ ತಾನು ಭ್ರಷ್ಟಾಚಾರ ಮತ್ತು ಅಕ್ರಮದ ಆರೋಪಗಳನ್ನು ಮಾಡಿದ್ದ ಕನಿಷ್ಠ 21 ಪ್ರಮುಖ ನಾಯಕರನ್ನು ಸ್ವಚ್ಛಗೊಳಿಸಿದೆ ಎಂದು ಅವರು ಆರೋಪಿಸಿದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ನಾಯಕರಾದ ನಾರಾಯಣ ರಾಣೆ, ಅಜಿತ್ ಪವಾರ್, ಛಗನ್ ಭುಜಬಲ್, ಅಶೋಕ್ ಚವ್ಹಾಣ್ ಅವರ ಹೆಸರುಗಳನ್ನು ಉಲ್ಲೇಖಿಸಿದ ಅವರು, ಬಿಜೆಪಿಯು ಈ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತ್ತು. ಆದರೆ ಇವರೆಲ್ಲ ಬಿಜೆಪಿ ಜತೆ ಕೈಜೋಡಿಸಿದ ಬಳಿಕ, ಅವರ ವಿರುದ್ಧ ಮಾತನಾಡುವುದನ್ನು ಆ ಪಕ್ಷ ನಿಲ್ಲಿಸಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.