ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ನಡುವೆ ಹೊಸದಾಗಿ ನಿರ್ಮಾಣಗೊಂಡಿರುವ ಸಂಸತ್ ಭವನ ಸೋರುತ್ತಿದೆ ಎನ್ನುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸಂಸತ್ ಭವನದೊಳಗೆ ನೀರು ಸೋರಿಕೆಯಾಗುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಮಣಿಕಂ ಟಾಗೋರ್, ‘ಹೊರಗಡೆ ಪೇಪರ್ ಸೋರಿದೆ. ಒಳಗಡೆ ನೀರು ಸೋರಿಕೆ’ ಎಂದು ಕುಹಕವಾಡಿದ್ದಾರೆ.
‘ಸಂಸತ್ತಿನ ಲಾಬಿಯಲ್ಲಿ ನೀರು ಸೋರಿಕೆಯಾಗುತ್ತಿರುವುದು ಹೊಸ ಕಟ್ಟಡದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಲೋಕಸಭೆಯಲ್ಲಿ ಈ ವಿಷಯದ ಕುರಿತು ನಿಲುವಳಿ ಸೂಚನೆ ಮಂಡನೆ ಮಾಡಲಾಗುವುದು’ ಎಂದು ಅವರು ಬರೆದುಕೊಂಡಿದ್ದಾರೆ.
ಹೊಸ ಸಂಸತ್‌ಗಿಂತ ಹಳೆಯ ಸಂಸತ್ ಒಳ್ಳೆಯದಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ನೀರು ಸೋರಿಕೆಯಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ನೀರು ಸೋರಿಕೆ, ರಾಮ ಮಂದಿರದಲ್ಲಿ ಸೋರಿಕೆ, ಏರ್‌ಪೋರ್ಟ್‌ಗಳಲ್ಲಿ ಸೋರಿಕೆ ಮುಂತಾದವುಗಳನ್ನು ಹೋಲಿಕೆ ಮಾಡಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹೊಸ ಸಂಸತ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 2020ರ ಡಿಸೆಂಬರ್ 10ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 2023ರ ಮೇ 28ರಂದು ಉದ್ಘಾಟನೆಗೊಂಡಿತ್ತು. ₹ 970 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.