ನವದೆಹಲಿ: ಉತ್ತರ ಭಾರತದ ರಾಜ್ಯಗಳಲ್ಲಿ ಬಿಸಿಲ ಆಘಾತ ಹಾಗೂ ದೇಶದೆಲ್ಲೆಡೆ ಮುಂಗಾರು ಮಳೆಯ ಕೊರತೆಯಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ಅವುಗಳ ಗರಿಷ್ಠ ಸಂಗ್ರಹಣ ಸಾಮರ್ಥ್ಯದ ಶೇ 21ರಷ್ಟು ಮಾತ್ರ ನೀರು ಲಭ್ಯ ಇದೆ.
ದೇಶದ 150 ಪ್ರಮುಖ ಜಲಾಶಯಗಳ ನೀರಿನ ಸಂಗ್ರಹಣಾ ಸಾಮರ್ಥ್ಯದ ಮಾಹಿತಿಯನ್ನೊಳಗೊಂಡಿರುವ ವಾರದ ಬುಲೆಟಿನ್ ಅನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಗುರುವಾರ ಬಿಡುಗಡೆ ಮಾಡಿದೆ.
ಪ್ರಮುಖ 150 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 178.784 ಬಿಸಿಎಂ (ಶತಕೋಟಿ ಘನ ಮೀಟರ್‌ಗಳು). ಸದ್ಯ, ಒಟ್ಟು ಸಾಮರ್ಥ್ಯದ ಶೇ 21ರಷ್ಟು ಅಂದರೆ, 37.662 ಬಿಸಿಎಂನಷ್ಟು ನೀರು ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ 46.883 ಬಿಸಿಎಂನಷ್ಟು ನೀರು ಸಂಗ್ರಹ ಇತ್ತು. ಈ ವರ್ಷ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಜಲ ಆಯೋಗ ಹೇಳಿದೆ.
ಪ್ರಸ್ತುತ ಸಂಗ್ರಹವು 10 ವರ್ಷಗಳ ಸರಾಸರಿ (ಸಾಮಾನ್ಯ) 41.446 ಬಿಸಿಎಂಗಿಂತ ಕಡಿಮೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಶೇ 22ರಷ್ಟು ನೀರಿತ್ತು. ಅದಕ್ಕಿಂತ ಹಿಂದಿನ ವಾರ ಶೇ 23ರಷ್ಟಿತ್ತು.
ಕರ್ನಾಟಕದ 16 ಜಲಾಶಯಗಳಲ್ಲಿ ಪ್ರಸ್ತುತ 4.366 ಬಿಸಿಎಂನಷ್ಟು ನೀರು ಸಂಗ್ರಹ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ 3.711 ಬಿಸಿಎಂನಷ್ಟು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಾಜ್ಯದ ಜಲಾಶಯಗಳು ಉತ್ತಮ ಸಂಗ್ರಹ ಹೊಂದಿವೆ. ಆದರೆ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿನ 42 ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ನೀರಿನ ಸಂಗ್ರಹಣಾ ಸಾಮರ್ಥ್ಯ 53.334 ಬಿಸಿಎಂನಷ್ಟಾಗಿದೆ. ಇವುಗಳಲ್ಲಿ ಪ್ರಸ್ತುತ 8.508 ಬಿಸಿಎಂನಷ್ಟು (ಶೇ 16) ಮಾತ್ರ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 21ರಷ್ಟು ನೀರಿನ ಸಂಗ್ರಹ ಇತ್ತು ಎಂದು ಆಯೋಗದ ಅಂಕಿ ಅಂಶಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.