ADVERTISEMENT

ಗೋವಾ ರೈಲ್ವೆ ಸುರಂಗ ಜಲಾವೃತ: ಪ್ರಯಾಣಿಕರ ಪರದಾಟ

ಪಿಟಿಐ
Published 10 ಜುಲೈ 2024, 15:38 IST
Last Updated 10 ಜುಲೈ 2024, 15:38 IST
<div class="paragraphs"><p>ಭಾರಿ ಮಳೆಯ ಕಾರಣ ಗೋವಾದ ಪೆರ್ನೆಮ್‌ ಸುರಂಗದೊಳಗೆ ಬಂದಿದ್ದ ನೀರನ್ನು ತೆರವುಗೊಳಿಸಲು ಸಿಬ್ಬಂದಿ ಶ್ರಮಿಸಿದರು </p></div>

ಭಾರಿ ಮಳೆಯ ಕಾರಣ ಗೋವಾದ ಪೆರ್ನೆಮ್‌ ಸುರಂಗದೊಳಗೆ ಬಂದಿದ್ದ ನೀರನ್ನು ತೆರವುಗೊಳಿಸಲು ಸಿಬ್ಬಂದಿ ಶ್ರಮಿಸಿದರು

   

–ಪಿಟಿಐ ಚಿತ್ರ

ಪಣಜಿ: ಭಾರಿ ಮಳೆಯ ಕಾರಣ ಗೋವಾದ ಪೆರ್ನೆಮ್‌ ಸುರಂಗದೊಳಗೆ ಹೆಚ್ಚು ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರ ಬುಧವಾರ ಬೆಳಿಗ್ಗೆ ಮತ್ತೊಮ್ಮೆ ಸ್ಥಗಿತವಾಗಿತ್ತು.

ADVERTISEMENT

ಇದರ ಪರಿಣಾಮ, ಸಿಎಸ್‌ಎಂಟಿ ಮುಂಬೈನಿಂದ ಹೊರಡುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದಾಯಿತು. ಕೆಲ ರೈಲುಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಿದರು. 

ಮೂರು ದಿನಗಳಿಂದ ಗೋವಾದಲ್ಲಿ ಭಾರಿ ಮಳೆಯಾಗುತ್ತಿದೆ. ಬುಧವಾರ ಬೆಳಿಗ್ಗೆಯಿಂದ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹವಾಮಾನ ಇಲಾಖೆಯು ‘ರೆಡ್‌ ಅಲರ್ಟ್‌’ ಘೋಷಿಸಿದೆ. 

ಮಧುರೆ–ಪೆರ್ನೆಮ್‌ ವಿಭಾಗದ ನಡುವಿನ ಪೆರ್ನೆಮ್‌ ಸುರಂಗದೊಳಗೆ ಮಂಗಳವಾರ ಮಧ್ಯಾಹ್ನ 2.35 ಗಂಟೆಗೆ ನೀರು ಹರಿಯಲು ಪ್ರಾರಂಭಿಸಿ, ರೈಲು ಸಂಚಾರಕ್ಕೆ ಅಡಚಣೆಯಾಯಿತು. ಈ ನೀರನ್ನು ತೆರವುಗೊಳಿಸಿದ ಬಳಿಕ ರಾತ್ರಿ 10.13ಕ್ಕೆ ಸಂಚಾರ ಪುನರಾರಂಭವಾಗಿತ್ತು. ಆದರೆ ಬುಧವಾರ ನಸುಕಿನ 2.35ಕ್ಕೆ ಪುನಃ ಸುರಂಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೇರಿತು ಎಂದು ಕೊಂಕಣ ರೈಲ್ವೆ ಕಾರ್ಪೊರೇಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ. 

ಕೆಲ ರೈಲುಗಳ ಸಂಚಾರ ಹಠಾತ್ತನೆ ರದ್ದಾಗಿದ್ದರಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸಿದರು. ಗೋವಾ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್‌ ಅನ್ನು, ಅದು ಹೊರಡುವ ಎರಡು ಗಂಟೆಗಳ ಮುನ್ನ ರದ್ದುಗೊಳಿಸಲಾಯಿತು. ಹಿರಿಯ ನಾಗರಿಕರು ಸೇರಿದಂತೆ ಗುಜರಾತಿನ 200 ಪ್ರಯಾಣಿಕರ ಗುಂಪು ಈ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಸಂಚಾರ ರದ್ದಾಗಿದ್ದು ಅವರ ಆತಂಕಕ್ಕೆ ಕಾರಣವಾಯಿತು.

‘ನಮ್ಮ ಗುಂಪಿನಲ್ಲಿ 60 ಮಂದಿ ಹಿರಿಯ ನಾಗರಿಕರಿದ್ದಾರೆ. ರೈಲು ಸಂಚಾರ ರದ್ದಾಗಿದ್ದರಿಂದ ಏನು ಮಾಡಬೇಕು ಎಂಬುದು ತಿಳಿಯದಂತಾಗಿದೆ’ ಎಂದು ಗುಂಪಿನ ಸದಸ್ಯ ಅಬ್ದುಲ್‌ ವಾಲೇಕರ್‌ ಬೇಸರ ವ್ಯಕ್ತಪಡಿಸಿದರು. 

‘ನಮ್ಮ ಗುಂಪು ದೊಡ್ಡದಿದ್ದು, ಗೋವಾದಲ್ಲಿ ಉಳಿಯುವುದು ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ. ಹೀಗಾಗಿ ನಮ್ಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಿ’ ಎಂದು ಮತ್ತೊಬ್ಬ ಸದಸ್ಯರು ಮನವಿ ರೈಲ್ವೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. 

‘ಪೆರ್ನೆಮ್‌ ಸುರಂಗ ಮಾರ್ಗದಲ್ಲಿ ಸಂಚಾರ ಪುನರಾರಂಭಿಸಲು ಎಲ್ಲ ಪ್ರಯತ್ನ ನಡೆಯುತ್ತಿದೆ’ ಎಂದು ಕೊಂಕಣ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಬಾಬನ್ ಘಾಟ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.