ತಿರುವನಂತಪುರಂ: ವಯನಾಡು ಭೂಕುಸಿತ ದುರಂತದ ಸಂದರ್ಭದಲ್ಲಿ ಕೇಂದ್ರದ ನೆರವಿಗಾಗಿ ರಾಜ್ಯ ಸರ್ಕಾರವು ಸಿದ್ಧಪಡಿಸಿದ್ದ ಮನವಿ ಪತ್ರದ ಬಗ್ಗೆ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ವಿಜಯನ್, 'ಕೇರಳದಲ್ಲಿ ನಡೆಯುತ್ತಿರುವುದು ವಿನಾಶಕಾರಿ ಪತ್ರಿಕೋದ್ಯಮ. ಒಂದು ವರ್ಗದ ಮಾಧ್ಯಮಗಳು ವಿವಾದಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿ ಬದಲಾಗಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕೇರಳ ಸರ್ಕಾರವು ನ್ಯಾಯೋಚಿತವಲ್ಲದ ರೀತಿಯಲ್ಲಿ ಕೇಂದ್ರದಿಂದ ಅನುದಾನ ಪಡೆಯಲು ಪ್ರಯತ್ನಿಸುತ್ತಿದೆ' ಎಂಬಂತಹ ಮಾಹಿತಿಯನ್ನೊಳಗೊಂಡ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಸಿಎಂ ಗುಡುಗಿದ್ದಾರೆ. ಇಂತಹ ನಕಲಿ ಸುದ್ದಿಗಳಿಂದಾಗಿ ರಾಜ್ಯದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ ಎಂದಿದ್ದಾರೆ.
'ರಾಜ್ಯ ಸರ್ಕಾರದ ವಿಶ್ವಾಸಾರ್ಹತೆಯನ್ನು ಹಾಳು ಮಾಡುವುದೇ ಇಂತಹ ಸುದ್ದಿಗಳ ಉದ್ದೇಶ' ಎಂದು ಪ್ರತಿಪಾದಿಸಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ ಮನವಿ ಪತ್ರ ತಯಾರಿಸುವುದು ಸಚಿವರಲ್ಲ. ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅಧಿಕಾರಿಗಳು ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು, ತಜ್ಞರು ಸಿದ್ಧಪಡಿಸಿದ ಮನವಿ ಪತ್ರದಲ್ಲಿರುವ ಮಾಹಿತಿಯನ್ನು ಮಾಧ್ಯಮಗಳು ತಪ್ಪಾಗಿ ಉಲ್ಲೇಖಿಸಿವೆ. ಸೇರಿಸಿರುವ ಅಂಕಿ–ಅಂಶವು ಉತ್ಪ್ರೇಕ್ಷೆಯಿಂದ ಕೂಡಿದ ಮಾಹಿತಿಯಲ್ಲ. ಅಂದಾಜು ಮೊತ್ತವಷ್ಟೇ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.