ವಯನಾಡ್: ಸುಮಾರು ಮೂರು ತಿಂಗಳ ಹಿಂದೆ ಸಂಭವಿಸಿದ ಭೀಕರ ಭೂಕುಸಿತದ ನೆನಪುಗಳು ಇನ್ನೂ ಮಾಸಿಲ್ಲ. ಭೂಕುಸಿತದ ಸಂತ್ರಸ್ತರು ತಮ್ಮ ನೆನಪುಗಳ ಭಾರವನ್ನು ಹೊತ್ತುಕೊಂಡು ತಮಗಾಗಿಯೇ ಇಲ್ಲಿ ಸಿದ್ಧಪಡಿಸಲಾಗಿದ್ದ ಮತಗಟ್ಟೆಗೆ ಬುಧವಾರ ಬಂದಿದ್ದರು. ಸಂತ್ರಸ್ತರ ಕಣ್ಣೀರಿನ, ಅಪ್ಪುಗೆಯ ಭಾನಾತ್ಮಕ ದೃಶ್ಯಗಳಿಗೆ ಈ ಮತಗಟ್ಟೆಯು ಸಾಕ್ಷಿಯಾಯಿತು.
ಮತಗಟ್ಟೆಯಲ್ಲಿನ ಇಡೀ ವಾತಾವರಣವೇ ದುಃಖದಿಂದ ಕೂಡಿತ್ತು. ಆದರೆ, ಸಂತ್ರಸ್ತರು ಧೃತಿಗೆಟ್ಟಿರಲಿಲ್ಲ, ಧೈರ್ಯದಿಂದಲೇ ಇದ್ದರು. ಭೂಕುಸಿತದಿಂದ ತೀವ್ರ ಹಾನಿಗೊಳಲಾಗಿದ್ದ ಮುಂಡಕ್ಕೈ, ಚೂರಲ್‌ಮಲ ಹಾಗೂ ಪುಂಜಿರಿಮಟ್ಟಂ ಗ್ರಾಮಗಳ ಜನರು ಪರಸ್ಪರ ಕುಶಲೋಪರಿ ನಡೆಸಿದರು. ಭೂಕುಸಿತಕ್ಕೂ ಹಿಂದಿನ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.
‘ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ವೇಳೆ ನಮ್ಮ ಪ್ರೀತಿಪಾತ್ರರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದ್ದೇವು. ನಂತರ ಏನೆಲ್ಲಾ ನಡೆದು ಹೋಯಿತು. ಈಗ ನಮ್ಮವರನ್ನು ಕಳೆದುಕೊಂಡು, ಉಪಚುನಾವಣೆಯ ಮತದಾನಕ್ಕೆ ಬಂದಿದ್ದೇವೆ’ ಎಂಬೆಲ್ಲಾ ಮಾತುಗಳು ಸಂತ್ರಸ್ತರ ನಡುವೆ ಸುಳಿದವು.
‘ಊರಿಗೇ ಊರೇ ಒಂದು ದೊಡ್ಡ ಕುಟುಂಬದಂತೆ ಇದ್ದೆವು. ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ ಎಲ್ಲ ಹಬ್ಬಗಳನ್ನೂ ಈ ಮೂರು ಊರಿನ ಜನರು ಒಟ್ಟಿಗೆ ಆಚರಿಸುತ್ತಿದ್ದೆವು. ಆದರೆ, 100 ದಿನಗಳ ಹಿಂದೆ ನಮ್ಮ ಖುಷಿ, ನಮ್ಮದು ಎಂದಿದ್ದ ಎಲ್ಲವನ್ನೂ ಭೂಕುಸಿತ ಕಸಿದುಕೊಂಡಿತು’ ಎನ್ನುತ್ತಾ ವೃದ್ಧರೊಬ್ಬರು ಕಣ್ಣೀರು ಸುರಿಸಿದರು.
ಸಂತ್ರಸ್ತರಿಗೆ ವಿವಿಧೆಡೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ, ಇವರೆಲ್ಲರಿಗೂ ಆಡಳಿತವು ಬಸ್ ವ್ಯವಸ್ಥೆ ಕಲ್ಪಿಸಿತ್ತು. ಬಸ್‌ನಲ್ಲಿ ಸಿಕ್ಕ ಪ್ರೀತಿಪಾತ್ರರನ್ನು ಸಂತೈಸುತ್ತಿದ್ದ ವೃದ್ಧರೊಬ್ಬರು, ‘ಅಳ ಬೇಡ. ಎಲ್ಲವೂ ಸರಿ ಹೋಗುತ್ತದೆ. ಒಳ್ಳೆಯದೇ ಆಗುತ್ತದೆ’ ಎಂದರು.
‘ನಾವು ಊರಿನವರು ಈಗ ಬೇರೆ ಬೇರೆ ಕಡೆಗಳಲ್ಲಿ ಉಳಿದುಕೊಂಡಿದ್ದೇವೆ. ಇಷ್ಟೊಂದು ದಿನಗಳ ಬಳಿಕ ಒಬ್ಬರನ್ನೊಬ್ಬರು ನೋಡುತ್ತಿದ್ದೇವೆ. ನಮ್ಮವರನ್ನು ನೋಡಿದ ಕೂಡಲೇ ನಾವು ಮೊದಲು ‘ಹೇಗಿದ್ದೀಯಾ?’ ಎಂದು ಕೇಳಲಿಲ್ಲ. ‘ಎಲ್ಲಿದ್ದೀಯಾ?’ ಎಂದು ಕೇಳಿಕೊಂಡೆವು’ ಎಂದು ಮಹಿಳೆಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.