ADVERTISEMENT

ಪ್ರಿಯಾಂಕಾ ಗಾಂಧಿ ಸ್ಪರ್ಧೆಯಿಂದ ಕಳೆಗಟ್ಟಿರುವ ವಯನಾಡ್‌ನಲ್ಲಿ ಮತದಾನದ ಉತ್ಸಾಹ

ಪಿಟಿಐ
Published 13 ನವೆಂಬರ್ 2024, 3:04 IST
Last Updated 13 ನವೆಂಬರ್ 2024, 3:04 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ವಯನಾಡ್‌: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಇಂದು (ನವೆಂಬರ್ 13) ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ.

ಮತಗಟ್ಟೆಗಳಲ್ಲಿ ಜನ ಸಾಲುಗಟ್ಟಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. 1,354 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 14 ಲಕ್ಷಕ್ಕೂ ಅಧಿಕ ಮಂದಿ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ.

2008ರಲ್ಲಿ ಈ ಕ್ಷೇತ್ರ ರಚನೆಯಾಗಿದ್ದು, ಅಲ್ಲಿಂದ ಈವರೆಗೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.

ADVERTISEMENT

ವಯನಾಡ್‌ ಲೋಕಸಭಾ ಕ್ಷೇತ್ರವು ವಯನಾಡ್ ಜಿಲ್ಲೆಯ ಮಾನಂದವಾಡಿ, ಸುಲ್ತಾನ್ ಬತ್ತೇರಿ ಹಾಗೂ ಕಲ್ಪೆಟ್ಟಾ ವಿಧಾನಸಭಾ ಕ್ಷೇತ್ರಗಳು, ಕೋಯಿಕ್ಕೋಡ್ ಜಿಲ್ಲೆಯ ತಿರುವಂಬಾಡಿ, ಮಲಪ್ಪುರಂ ಜಿಲ್ಲೆಯ ಏರ್ನಾಡ್‌, ನಿಲಂಬೂರ್‌ ಹಾಗೂ ವಂಡೂರ್ ಕ್ಷೇತ್ರಗಳನ್ನು ಒಳಗೊಂಡಿದೆ.

ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ಈ ಕ್ಷೇತ್ರ ತೆರವಾಗಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ರಾಯ್‌ಬರೇಲಿಯನ್ನು ಉಳಿಸಿಕೊಂಡಿದ್ದರು.

ಈ ಉಪಚುನಾವಣೆಯಲ್ಲಿ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯುಡಿಎಫ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ, ಎಲ್‌ಡಿಎಫ್‌ನಿಂದ ಸತ್ಯನ್ ಮೋಕರಿ ಕಣದಲ್ಲಿದ್ದಾರೆ. ಎನ್‌ಡಿಎ ಮೈತ್ರಿಕೂಟದಿಂದ ನವ್ಯಾ ಹರಿದಾಸ್‌ ಅದೃಷ್ಟ ‍ಪರೀಕ್ಷೆಗೆ ಇಳಿದಿದ್ದಾರೆ.

ಲೋಕಸಭಾ ಕ್ಷೇತ್ರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು 2,500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವೆಬ್‌ ಕಾಸ್ಟಿಂಗ್ ವ್ಯವಸ್ಥೆ ಮೂಲಕ ಮತದಾನದ ಲೈವ್‌ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ತ್ರಿಶೂರು ಜಿಲ್ಲೆಯ ಚೇಲಕ್ಕರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಜನ ಬೆಳಿಗ್ಗೆಯಿಂದಲೇ ಮತಗಟ್ಟೆಗೆ ಧಾವಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮತದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.