ತಿರುವನಂತಪುರ: ವಯನಾಡ್ ಲೋಕಸಭಾ ಕ್ಷೇತ್ರವು ಗಾಂಧಿ ಕುಟುಂಬಕ್ಕೆ ಒಂದು ‘ಆಯ್ಕೆ’ ಮಾತ್ರ ಎಂಬುದು ಇಲ್ಲಿನ ಜನರಿಗೆ ಈಗ ಮನವರಿಕೆಯಾಗಿದೆ ಎಂದು ವಯನಾಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನವ್ಯಾ ಹರಿದಾಸ್ ತಿಳಿಸಿದ್ದಾರೆ.
ವಯನಾಡ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ನವ್ಯಾ ಅವರನ್ನು ಎನ್‌ಡಿಎ ಕಣಕ್ಕಿಳಿಸಿದೆ. ಭಾನುವಾರ ಕೋಯಿಕ್ಕೋಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಅವರು ಹೊಸಮುಖವೇನಲ್ಲ. ಆದರೆ, ವಯನಾಡ್‌ಗೆ ಅವರು ಹೊಸಮುಖ’ ಎಂದು ಹೇಳಿದರು.
‘ವಯನಾಡ್‌ನ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪ್ರಸ್ತಾಪಿಸದ ಗಾಂಧಿ ಕುಟುಂಬದ ಪ್ರತಿನಿಧಿಯಾಗಿ ಪ್ರಿಯಾಂಕಾ ಅವರು ಇಲ್ಲಿಗೆ ಬರುತ್ತಿದ್ದಾರೆ’ ಎಂದು ಆರೋಪಿಸಿದರು.
‘ರಾಹುಲ್ ಗಾಂಧಿ ಮುಂದಿನ ಐದು ವರ್ಷ ತಮ್ಮೊಂದಿಗೆ ಇರಲಿದ್ದಾರೆ ಎಂಬ ನಂಬಿಕೆಯಿಂದ ವಯನಾಡ್‌ನ ಜನ ಅವರನ್ನು ಗೆಲ್ಲಿಸಿದ್ದರು. ಆದರೆ, ರಾಹುಲ್ ವಯನಾಡ್ ಅನ್ನು ಕೈಬಿಟ್ಟು ರಾಯ್‌ಬರೇಲಿಯನ್ನು ಆರಿಸಿಕೊಂಡರು. ಹೀಗಾಗಿ ಗಾಂಧಿ ಕುಟುಂಬಕ್ಕೆ ಈ ಕ್ಷೇತ್ರದ ಜನರ ಮೇಲೆ ಪ್ರೀತಿಯಿಲ್ಲ. ಸಂಸತ್ತಿಗೆ ಆಯ್ಕೆಯಾದರೆ ಸಾಕು ಎಂಬ ಉದ್ದೇಶದಿಂದ ಮಾತ್ರ ಇಲ್ಲಿಗೆ ಬಂದಿದ್ದಾರೆ’ ಎಂದು ದೂರಿದರು.
ತಮ್ಮನ್ನು ಅಭ್ಯರ್ಥಿಯಾಗಿ ಆರಿಸಿದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ನ.13ರಂದು ನಡೆಯುವ ಮತದಾನದಲ್ಲಿ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವ್ಯಾ ಅವರು ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.