ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ ಹಾಗೂ ಪುಂಜಿರಿಮಟ್ಟಂನಲ್ಲಿ ನಡೆದ ಭಾರಿ ಭೂಕುಸಿತದಿಂದಾಗಿ ನಿರಾಶ್ರಿತರಾಗಿದ್ದ 2 ಸಾವಿರಕ್ಕೂ ಅಧಿಕ ಮಂದಿಯನ್ನು ಕಾಳಜಿ ಕೇಂದ್ರಗಳಿಂದ ಸ್ಥಳಾಂತರಿಸಲಾಗಿದೆ. ಕೆಲವರು ಸಂಬಂಧಿಕರ ಮನೆಗೆ ತೆರಳಿದರೆ, ಇನ್ನು ಕೆಲವರು ಸರ್ಕಾರ ವ್ಯವಸ್ಥೆ ಮಾಡಿರುವ ಬಾಡಿಗೆ ಮನೆಗೆ ತೆರಳಿದ್ದಾರೆ.
ಕಾಳಜಿ ಕೇಂದ್ರಗಳಾಗಿದ್ದ ಶಾಲೆಗಳಲ್ಲಿ ಮಂಗಳವಾರದಿಂದ ತರಗತಿಗಳು ಅರಂಭವಾಗಲಿದೆ ಎಂದು ಆನ್ ಮನೋರಮ ವರದಿ ಮಾಡಿದೆ.
ಭೂಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದೆ ಎಂದು ಸರ್ಕಾರ ಹೇಳಿದೆ. ಕಾಳಜಿ ಕೇಂದ್ರದಲ್ಲಿದ್ದ 728 ಕುಟುಂಬಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲಾಗಿದೆ. 2,569 ಮಂದಿ ಸರ್ಕಾರದ ವಿವಿಧ ವಸತಿ ಸಮುಚ್ಛಯ ಹಾಗೂ ಇತರೆ ಬಾಡಿಗೆ ಮನೆಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಕಾಣೆಯಾದವರ ಪತ್ತೆಗೆ ಸೋಮವಾರದಿಂದ ಕಾರ್ಯಾಚರಣೆ ಆರಂಭವಾಗಿದೆ. ಪುನರ್ವಸತಿ ಕಲ್ಪಿಸಿರುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರದ ತಂಡವೊಂದು ಆಗಮಿಸುವ ಸಾಧ್ಯತೆಯೂ ಇದೆ.
ಭೂಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಚರ್ಚೆ ಮಾಡಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಸ್ಟ್ 29ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
(ಪಿಟಿಐ ಮಾಹಿತಿ ಸೇರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.