ತಿರುವನಂತಪುರ: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾದ ಪರಿಹಾರದ ಹಣವನ್ನು ಸಾಲ ಪಾವತಿಗೋಸ್ಕರ ಕಡಿತ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ನಡೆಗೆ ಕೇರಳ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ಸಂತ್ರಸ್ತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸಾಲ ಮನ್ನಾ ಮಾಡುವುದರಿಂದ ಬ್ಯಾಂಕ್‌ಗಳಿಗೆ ತಡೆಯಲಾರದ ಹೊರೆ ಉಂಟಾಗಲಾರದು’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಬಡ್ಡಿದರದಲ್ಲಿ ಸಡಿಲಿಕೆ ಅಥವಾ ಸಾಲ ಮರುಪಾವತಿ ಅವಧಿ ವಿಸ್ತರಣೆ ಮುಂತಾದವುಗಳು ಭೂಕುಸಿತ ಸಂತ್ರಸ್ತರಿಗೆ ಪರಿಹಾರವಲ್ಲ. ಸಾಲ ಪಡೆದುಕೊಂಡ ಹಲವು ಮಂದಿ ಸಾವಿಗೀಡಾಗಿದ್ದಾರೆ. ದುರಂತದಿಂದಾಗಿ ಅವರ ಭೂಮಿ ಬಳಕೆಗೆ ಮಾಡಲು ಆಗದಂತೆ ಆಗಿದೆ. ‘ದುರಂತದಿಂದ ತೊಂದರೆಗೊಳಗಾದ ಜನರ ಸಂಪೂರ್ಣ ಸಾಲ ಮನ್ನಾ ಮಾಡುವುದು ನಿಮ್ಮಿಂದ ಸಾಧ್ಯವಿದೆ’ ಎಂದು ಪಿಣರಾಯಿ ಹೇಳಿದ್ದಾರೆ.
‘ದುರಂತದಿಂದಾಗಿ ಅಲ್ಲಿನ ಭೂಮಿಗಳು ಬಳಕೆಗೆ ಅಯೋಗ್ಯವಾಗಿದೆ. ಬಹುತೇಕ ರೈತರು ಸಾಲ ಮಾಡಿಯೇ ಭೂಮಿ ಖರೀದಿ ಮಾಡಿದ್ದಾರೆ. ಮನೆ ಕಟ್ಟಲು ಸಾಲ ತೆಗೆದುಕೊಂಡವರ ಮನೆಯೇ ಇಲ್ಲದಂತಾಗಿದೆ. ಈಗ ಅವರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ’ ಎಂದು ಪಿಣರಾಯಿ ಹೇಳಿದ್ದಾರೆ.
ಸಾಲ ಮನ್ನಾ ಮಾಡಿದ ಬಳಿಕ ಬ್ಯಾಂಕ್‌ಗಳು ಸರ್ಕಾರದ ನೆರವನ್ನು ಬಯಸುವುದು ಸಹಜ. ಆದರೆ ಆ ಬಾರಿ ಆ ನಿರ್ಧಾರ ತೆಗೆದುಕೊಳ್ಳಬೇಡಿ ಎನ್ನುವುದು ನನ್ನ ಸಲಹೆ. ಸಾಲ ಮನ್ನಾ ಹೊರೆಯನ್ನು ಬ್ಯಾಂಕ್‌ಗಳೇ ತಡೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.
ಸರ್ಕಾರ ನೀಡಿದ ಪರಿಹಾರ ಧನವನ್ನು ಮಾಸಿಕ ಕಂತಿಗೆ ಕಡಿತ ಮಾಡಿದ ಗ್ರಾಮೀಣ ಬ್ಯಾಂಕ್ ನಡೆಯನ್ನು ಟೀಕಿಸಿದ ಪಿಣರಾಯಿ, ‘ಈ ಸಂಕಷ್ಟದ ಸಮಯದಲ್ಲಿ ಯಾವುದನ್ನೂ ಯಾಂತ್ರಿಕವಾಗಿ ಮಾಡಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.