ADVERTISEMENT

ಮುಲ್ಲಪೆರಿಯಾರ್‌: ಹೊಸ ಅಣೆಕಟ್ಟೆ ನಿರ್ಮಾಣ ಬೇಡಿಕೆಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:02 IST
Last Updated 8 ಆಗಸ್ಟ್ 2024, 16:02 IST
ಮುಲ್ಲಪ್ಪೆರಿಯಾರ್‌ ಅಣೆಕಟ್ಟೆ (ಸಂಗ್ರಹ ಚಿತ್ರ)
ಮುಲ್ಲಪ್ಪೆರಿಯಾರ್‌ ಅಣೆಕಟ್ಟೆ (ಸಂಗ್ರಹ ಚಿತ್ರ)   

ತಿರುವನಂತಪುರ: ಕೇರಳದ ಮುಲ್ಲಪೆರಿಯಾರ್ ಬಳಿ ಇರುವ 130 ವರ್ಷ ಹಳೆಯ ಅಣೆಕಟ್ಟೆಯ ಬಳಕೆಯನ್ನು ನಿಲ್ಲಿಸಿ, ಹೊಸದಾಗಿ ಅಣೆಕಟ್ಟೆಯನ್ನು ನಿರ್ಮಿಸಬೇಕು ಎಂಬ ಬೇಡಿಕೆ, ದುರಂತದ ಹಿನ್ನೆಲೆಯಲ್ಲಿ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಪಕ್ಷಗಳ ಸಂಸದರು ಈ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಯುಡಿಎಫ್‌ ಸಂಸದರೊಬ್ಬರು  ಲೋಕಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ. ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ ಅವರನ್ನು ಭೇಟಿಯಾಗಿ ಬೇಡಿಕೆ ಪ್ರಸ್ತಾಪಿಸಿದ್ದಾರೆ.

ವಯನಾಡ್‌ ದುರಂತದ ಬಳಿಕ ಮತ್ತೊಂದು ದುರಂತವನ್ನು ತಡೆದುಕೊಳ್ಳುವ ಶಕ್ತಿ ರಾಜ್ಯಕ್ಕಿಲ್ಲ ಎನ್ನುವುದನ್ನು ಸಚಿವರಿಗೆ ಈ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ.

ADVERTISEMENT

ಸುರ್ಖಿ (ಮರಳಿನ ಬದಲಿಗೆ ಬಳಸುವ ವಸ್ತು) ಮತ್ತು ಸುಣ್ಣದ ಕಲ್ಲಿನ ಮಿಶ್ರಣದಿಂದ 1887–1895ರಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಈ ಮಿಶ್ರಣವು ಕಾಂಕ್ರೀಟ್‌ನಷ್ಟು ಶಕ್ತಿಯುತವಾದುದಲ್ಲ. ಒಂದು ವೇಳೆ ಅಣೆಕಟ್ಟೆಗೆ ಹಾನಿಯಾದರೆ ರಾಜ್ಯದ ಇಡುಕ್ಕಿ, ಕೊಚ್ಚಿ, ಕೊಟ್ಟಾಯಂ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಹೊಸ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ವಿರೋಧ

‘ಮುಲ್ಲಪ್ಪೆರಿಯಾರ್‌ ಅಣೆಕಟ್ಟು ಹಾನಿಗೊಳಗಾಗಿದ್ದು ಇದನ್ನು ಬಲಪಡಿಸುವ ಅಗತ್ಯ ಇದೆ’ ಎಂದು ಕೇಂದ್ರ ಜಲ ಆಯೋಗವು 1979ರಲ್ಲಿ ಹೇಳಿತ್ತು. ಈ ಬಳಿಕ ಇದನ್ನು ಬಲಪಡಿಸುವ ಕಾರ್ಯವೂ ನಡೆದಿತ್ತು. ‘ಅಣೆಕಟ್ಟೆಯನ್ನು ಬಲಗೊಳಿಸಲಾಗಿದೆ. ಹಾಗಾಗಿ ಹೊಸ ಅಣೆಕಟ್ಟೆ ನಿರ್ಮಾಣದ ಅಗತ್ಯ ಇಲ್ಲ’ ಎಂದು ತಮಿಳುನಾಡು ವಾದಿಸುತ್ತಿದೆ. ಕೇರಳದಲ್ಲಿ ಅಣೆಕಟ್ಟು ಇದೆಯಾದರೂ ತಮಿಳುನಾಡು ಸರ್ಕಾರವೇ ಇದನ್ನು ನಿರ್ವಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.