ತ್ರಿಶ್ಶೂರ್: ವಯನಾಡ್ ಜಿಲ್ಲೆಯ ಭೂಕುಸಿತದ ಸ್ಥಳಗಳಲ್ಲಿ ಕೆಚ್ಚೆದೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ವೃತ್ತಿಪರತೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾನುವಾರ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ‘ಇದು ರಾಜ್ಯದ ಇತಿಹಾಸದಲ್ಲಿ ಸಂಭವಿಸಿದ ಅತಿ ದೊಡ್ಡ ದುರಂತ’ ಎಂದು ಹೇಳಿದರು.
ಕೇರಳ ಪೊಲೀಸ್ ನಿರ್ಗಮನ ಪಥಸಂಚಲನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭೀಕರ ದುರಂತದಲ್ಲಿ ಉಂಟಾದ ಅನಾಹುತಗಳಿಂದ ರಾಜ್ಯವು ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ’ ಎಂದು ಹೇಳಿದರು.
‘ಪೊಲೀಸ್ ಮತ್ತು ಅಗ್ನಿಶಾಮಕ ದಳವು ದಿಟ್ಟತನದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ವಯನಾಡ್ ದುರಂತಕ್ಕೆ ಇಡೀ ಜಗತ್ತು ಕಂಬನಿ ಮಿಡಿದಿದೆ. ಮಾನವೀಯತೆಯ ಅನಾವರಣವಾಗಿದೆ’ ಎಂದರು.
ಪೊಲೀಸ್ ಪಡೆಗೆ ಹೊಸದಾಗಿ ಸೇರ್ಪಡೆಯಾದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉನ್ನತ ವಿದ್ಯಾಭ್ಯಾಸ ಪಡೆದ ಮಹಿಳೆಯ ಉಪಸ್ಥಿತಿಯು ಪೊಲೀಸ್ ಪಡೆಯ ಬಲವನ್ನು ಹೆಚ್ಚಿಸುತ್ತದೆ. ಕಳೆದ ಬ್ಯಾಚ್‌ನಲ್ಲಿ 1,308 ಮಹಿಳೆಯರಿದ್ದರು. ಈ ಪೈಕಿ 23 ಮಹಿಳೆಯರು ಸಬ್ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಈ ಬ್ಯಾಚ್‌ನಲ್ಲಿ 1,403 ಮಹಿಳೆಯರು ಕೇರಳ ಪೊಲೀಸ್ ಪಡೆಯ ಭಾಗವಾಗಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.