ನವದೆಹಲಿ/ತಿರುವನಂತಪುರ: ವಯನಾಡ್‌ನಲ್ಲಿ ಸಂಭವಿಸಿರುವ ಭೂಕುಸಿತ ಅವಘಡಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರದ ನಡುವೆ ಪರಸ್ಪರ ಕೆಸರೆರಚಾಟ ಆರಂಭವಾಗಿದೆ.
‘ಭೂಕುಸಿತ ಸಾಧ್ಯತೆ’ ಕುರಿತು ಎಚ್ಚರಿಕೆ ನೀಡಲಾಗಿತ್ತು. ಕೇರಳ ಸರ್ಕಾರ ಕಡೆಗಣಿಸಿತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಅಲ್ಲಗಳೆದಿದ್ದಾರೆ.
ಭೂಕುಸಿತದ ಪರಿಹಾರ ಕಾರ್ಯಗಳಿಗೆ ಕೇರಳ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರ ನಿಲ್ಲಲಿದೆ ಎಂದು ಭರವಸೆ ನೀಡುವುದರ ಜೊತೆಗೆ ಶಾ ಅವರು, ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದರು.
‘ಭೂಕುಸಿತ ಸಾಧ್ಯತೆ ಕುರಿತು ಮುನ್ನೆಚ್ಚರಿಕೆ ನೀಡಿದ್ದೆವು. ಎನ್‌ಡಿಆರ್‌ಎಫ್‌ನ 9 ತುಕಡಿ ಕಳುಹಿಸಲಾಗಿತ್ತು. ಆ ನಂತರವೂ ಕೇರಳ ಸರ್ಕಾರವು ಜಾಗೃತವಾಗಲಿಲ್ಲ. ಬಹುಶಃ ಒಂದು ಬಾರಿ ಸ್ಪಂದಿಸಿದ್ದರೆ, ಹಲವು ಜೀವಗಳನ್ನು ಉಳಿಸಬಹುದಾಗಿತ್ತು’ ಎಂದು ಸಂಸತ್ತಿನಲ್ಲಿ ಈ ಕುರಿತು ಮಾತನಾಡಿದ ಅಮಿತ್ ಶಾ ಹೇಳಿದರು.
ರಾಜ್ಯಸಭೆಯಲ್ಲಿ ಈ ವಿಷಯ ಕುರಿತು ಗಮನಸೆಳೆದ ರಾಘವ್ ಛಡ್ಡಾ, ಜೆಬಿ ಮ್ಯಾಥರ್, ಎ.ಎ.ರಹೀಂ ಅವರು, ಇಂತಹ ಗಂಭೀರ ಅವಘಡ ಕುರಿತು ಮುನ್ಸೂಚನೆ ನೀಡುವ ವ್ಯವಸ್ಥೆ ಅಳವಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು, ‘ಸಂಭವನೀಯ ಭೂಕುಸಿತ ಕುರಿತಂತೆ ಕೇರಳ ಸರ್ಕಾರಕ್ಕೆ ಜುಲೈ 23, 24, 25 ಮತ್ತು 26ರಂದೇ ಮುನ್ನೆಚ್ಚರಿಕೆ ನೀಡಲಾಗಿತ್ತು. ಇಂತಹುದೇ ಸಂದೇಶಕ್ಕೆ ಇತರೆ ಕೆಲವು ರಾಜ್ಯಗಳು ಸ್ಪಂದಿಸಿವೆ. ಆ ರಾಜ್ಯಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ’ ಎಂದು ಹೇಳಿದರು.
ಒಡಿಶಾಗೆ ಏಳು ದಿನದ ಹಿಂದೆ ಚಂಡಮಾರುತದ ಎಚ್ಚರಿಕೆ ನೀಡಲಾಗಿತ್ತು. ಅಲ್ಲಿ ಒಂದು ಸಾವು ಮಾತ್ರ ಸಂಭವಿಸಿತು. ಗುಜರಾತ್‌ಗೆ ಇಂತ ಎಚ್ಚರಿಕೆ ನೀಡಲಾಗಿತ್ತು. ಅಲ್ಲಿ ಒಂದು ಪ್ರಾಣಿಯೂ ಸತ್ತಿಲ್ಲ. ಆದರೆ, ಬಾಧಿತರಿಗೆ ನೆರವಾಗಲು ಕೇರಳ ಸರ್ಕಾರ ಮಾಡಿದ್ದಾದರೂ ಏನು?’ ಎಂದರು.
‘ಮುನ್ನೆಚ್ಚರಿಕೆ ವಹಿಸಿ ರಾಜ್ಯ ಸರ್ಕಾರವು ನಿವಾಸಿಗಳನ್ನು ಮೊದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿತ್ತೆ. ಕನಿಷ್ಠ ಹಾಗೆ ಮಾಡಿದ್ದರೂ ಅನೇಕರ ಜೀವ ಉಳಿಯುತ್ತಿತ್ತು’ ಎಂದು ಗೃಹ ಸಚಿವರು ಹೇಳಿದರು.
ರಾಜ್ಯಸಭೆಯಲ್ಲಿ ಈ ಕುರಿತ ಚರ್ಚೆಯಲ್ಲಿ ಸಂಸದರಾದ ಜಾನ್ ಬ್ರಿಟ್ಟಾ, ರಹೀಂ (ಸಿಪಿಎಂ) ಮ್ಯಾಥರ್ (ಕಾಂಗ್ರೆಸ್), ಸಾಕೇತ್ ಗೋಖಲೆ (ತೃಣಮೂಲ ಕಾಂಗ್ರೆಸ್), ಮುಜಿಬುಲ್ಲಾ ಖಾನ್ (ಬಿಜೆಡಿ)ಅವರು, ವಯನಾಡ್ ದುರಂತವನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸುವಂತೆ ಆಗ್ರಹಪಡಿಸಿದರು.
ಸದಸ್ಯ ಜಾನ್ ಬ್ರಿಟ್ಟಾ ಅವರು, ದೇಶದಲ್ಲಿ ಸಂಭವಿಸಿರುವ 3,582 ಭೂಕುಸಿತ ಘಟನೆಗಳಲ್ಲಿ ಶೇ 60ರಷ್ಟು ಅಥವಾ 2,239ರಷ್ಟು ಅವಘಡಗಳು ಕೇರಳದಲ್ಲಿಯೇ ಆಗಿವೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ನೆರವಾಗಬೇಕು ಎಂದು ಒತ್ತಾಯಿಸಿದರು.
ಜೆಬಿ ಮ್ಯಾಥರ್ ಅವರು, ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಪ್ರಕಟಿಸಿರುವ ತಲಾ ₹ 2 ಲಕ್ಷ ಪರಿಹಾರ ಕಡಿಮೆಯಾಗಿದೆ. ಕನಿಷ್ಟ ₹ 25 ಲಕ್ಷ ಘೋಷಿಸಬೇಕು ಎಂದು ಒತ್ತಾಯಿಸಿದರು.
ಡಿಎಂಕೆಯ ಸದನದ ನಾಯಕ ತಿರುಚ್ಚಿ ಶಿವ ಅವರು, ಭೂಕುಸಿತ ಪ್ರಕರಣಗಳಿಗೆ ಅರಣ್ಯ ಪ್ರದೇಶ ಕುಗ್ಗುತ್ತಿರುವುದು ಕಾರಣ. ಇದನ್ನು ತಡೆಯಲು ತಕ್ಷಣದ ಕ್ರಮ ಅಗತ್ಯ ಎಂದು ಹೇಳಿದರು.
ಭೂಕುಸಿತ ಬಾಧಿತ ಪ್ರದೇಶಗಳಿಗೆ ಐಎಂಡಿ ಮಂಗಳವಾರದವರೆಗೆ ಆರೆಂಜ್ ಅಲರ್ಟ್ ನೀಡಿತ್ತು. 2 ದಿನದಲ್ಲಿ 115 ರಿಂದ 204 ಮಿ.ಮೀ ಮಳೆ ಆಗಬಹುದು ಎಂದೂ ಅಂದಾಜಿಸಿತ್ತು. ವಾಸ್ತವವಾಗಿ 48 ಗಂಟೆಗಳಲ್ಲಿ 572 ಮಿ.ಮೀ. ಮಳೆ ಸುರಿದಿದೆ.ಪಿಣರಾಯಿ ವಿಜಯನ್ ಮುಖ್ಯಮಂತ್ರಿ
ತಿರುವನಂತಪುರ: ಅಮಿತ್ ಶಾ ಅವರ ಹೇಳಿಕೆಯು ‘ಆಧಾರರಹಿತ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರತಿಕ್ರಿಯಿಸಿದ್ದಾರೆ. ‘ಹವಾಮಾನ ಇಲಾಖೆ (ಐಎಂಡಿ) ವರದಿ ಆಧರಿಸಿ ಗೃಹ ಸಚಿವರು ಹೇಳಿಕೆ ನೀಡಿರಬಹುದು. ರಾಜ್ಯ ಸರ್ಕಾರ ಐಎಂಡಿ ವರದಿಗೆ ಪ್ರಾಮುಖ್ಯತೆ ನೀಡಿದ್ದು ಕ್ರಮ ಕೈಗೊಂಡಿದೆ’ ಎಂದು ಹೇಳಿದರು.
ಜು.29ರಂದು ಐಎಂಡಿ ಆರೆಂಜ್ ಅಲರ್ಟ್ ಅನ್ನೇ ನೀಡಿತ್ತು. ಭೂಕುಸಿತ ಸಂಭವಿಸಿದ ಬಳಿಕ ರೆಡ್ ಅಲರ್ಟ್ ನೀಡಿದೆ. ವಯನಾಡ್‌ನಲ್ಲಿರುವ ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ಮಾಪಕ ಕೇಂದ್ರವು ಗ್ರೀನ್ ಅಲರ್ಟ್ ನೀಡಿತ್ತು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.