ಬೆಂಗಳೂರು: ಕೇರಳದ ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣದಲ್ಲಿ ಸಿಲುಕಿದವರಲ್ಲಿ ಈವರೆಗೂ 84 ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಇಂಥದ್ದೊಂದು ಪ್ರಳಯ ಸದೃಶ್ಯ ಘಟನೆಯು ಹಿಂದೆ ಸಂಭವಿಸಿದ ಹಲವು ಭೂಕುಸಿತ ಪ್ರಕರಣಗಳನ್ನು ಕಣ್ಣಮುಂದೆ ಹಾದುಹೋಗುವಂತೆ ಮಾಡುತ್ತಿವೆ.
ಕೇದಾರನಾಥದಲ್ಲಿ 2013ರಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಆರು ಸಾವಿರ ಮಂದಿ ಮೃತಪಟ್ಟಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತಿ ದೊಡ್ಡ ನೈಸರ್ಗಿಕ ವಿಕೋಪ ಘಟನೆಯಾಗಿದೆ. ಇತ್ತೀಚೆಗೆ ಕರ್ನಾಟಕದ ಉತ್ತರ ಕನ್ನಡದ ಶಿರೂರು ಬಳಿಯ ಭೂಕುಸಿತ ಪ್ರಕರಣವೂ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಅಕಾಲಿಕ ಹಾಗೂ ಅಸಮರ್ಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಂಥ ಘಟನೆಗಳು ಆಗಾಗ್ಗೆ ಮರುಕಳಿಸುತ್ತಲೇ ಇವೆ. ಇಂಥವುಗಳಲ್ಲಿ ಪ್ರಮುಖ ಘಟನೆಗಳ ಪಟ್ಟಿ ಇಲ್ಲಿದೆ.
ಅಸ್ಸಾಂನ ಗುವಾಹಟಿ ಭೂಕುಸಿತ: 1948ರ ಸೆ. 18ರಂದು ಸುರಿದ ಭಾರಿ ಮಳೆಗೆ ಭೂಕುಸಿತ ಸಂಭವಿಸಿದ ಸುಮಾರು 500 ಜನ ಮೃತಪಟ್ಟಿದ್ದರು. ಈ ದುರಂತದಲ್ಲಿ ಇಡೀ ಗ್ರಾಮವೇ ನಾಶವಾಗಿತ್ತು ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಭೂಕುಸಿತ: 1968ರ ಅ. 4ರಂದು ಭಾರಿ ಮಳೆಗೆ ಸುಮಾರು 60 ಕಿ.ಮೀ. ಉದ್ದನೆಯ ಹೆದ್ದಾರಿಯಲ್ಲಿ 91 ಕಡೆ ಭೂಕುಸಿತ ಉಂಟಾಗಿತ್ತು. ಈ ದುರಂತದಲ್ಲೂ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು.
ಉತ್ತರಾಖಂಡದ ಮಲ್ಪಾ ಭೂಕುಸಿತ: 1998ರ ಆ.11ರಿಂದ 17ರವರೆಗೆ ಉತ್ತರಾಖಂಡದ ಮಲ್ಪಾ ಗ್ರಾಮದಲ್ಲಿ ನಿರಂತರ ಭೂಕುಸಿತ ಉಂಟಾಗಿದ್ದರಿಂದ 380 ಜನ ಪ್ರಾಣ ಕಳೆದುಕೊಂಡಿದ್ದರು. ಭೂಕುಸಿತದಲ್ಲಿ ಇಡೀ ಗ್ರಾಮವೇ ಕೊಚ್ಚಿ ಹೋಗಿತ್ತು.
ಮಹಾರಾಷ್ಟ್ರದ ಮುಂಬೈ ಭೂಕುಸಿತ: 2000 ಇಸವಿಯ ಜುಲೈನಲ್ಲಿ ಸಂಭವಿಸಿದ ಮುಂಬೈ ಮಹಾಮಳೆಗೆ ಭೂಕುಸಿತ ಉಂಟಾದ ಪರಿಣಾಮ 61 ಜನ ಮೃತಪಟ್ಟಿದ್ದರು. ಲೋಕಲ್ ಟ್ರೈನ್ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು.
ಕೇರಳದ ಅಂಬೂರಿ ಭೂಕುಸಿತ: ಕೇರಳದ ಇತಿಹಾಸದಲ್ಲೇ (2024ರ ಜುಲೈ 30ರ ಘಟನೆ ಹೊರತುಪಡಿಸಿ) ಅತ್ಯಂತ ಭೀಕರ ಭೂಕುಸಿತ ಪ್ರಕರಣ ಇದಾಗಿತ್ತು. 2001ರ ನ. 9ರಂದು ಸುರಿದ ಭಾರಿ ಮಳೆಗೆ 40 ಜನ ಮೃತಪಟ್ಟಿದ್ದರು.
ಉತ್ತರಾಖಂಡದ ಕೇದಾರನಾಥ ಭೂಕುಸಿತ: ಉತ್ತರಾಖಂಡದಲ್ಲಿ 2013ರ ಜೂನ್ 16ರಂದು ಸುರಿದ ಭಾರಿ ಮಳೆಗೆ ಉಂಟಾದ ಪ್ರವಾಹವು ಭೂಕುಸಿತಕ್ಕೆ ಕಾರಣವಾಗಿತ್ತು. ಈ ಪ್ರವಾಹದಲ್ಲಿ 4,200 ಹಳ್ಳಿಗಳು ಭಾದಿತ ಪ್ರದೇಶವಾದವು. ಸುಮಾರು 6,054 ಜನ ಪ್ರಾಣ ಕಳೆದುಕೊಂಡಿದ್ದರು. ಇದು ಈವರೆಗೆ ದಾಖಲಾದ ಅತಿ ದೊಡ್ಡ ದುರಂತವಾಗಿದೆ.
ಮಹಾರಾಷ್ಟ್ರದ ಮಲಿನ ಭೂಕುಸಿತ: 2014ರ ಜುಲೈ 30ರಂದು ಮಹಾರಾಷ್ಟ್ರದ ಮಲಿನ ಗ್ರಾಮದಲ್ಲಿ ಸುರಿದ ಮಳೆಗೆ ಭೂಕುಸಿತ ಉಂಟಾಗಿತ್ತು. ಇದರಲ್ಲಿ 151 ಜನ ಮೃತಪಟ್ಟು, 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದರು.
ಮಹಾರಾಷ್ಟ್ರದ ರಾಯಗಢದಲ್ಲಿ 2023ರ ಜುಲೈ 19ರಂದು ಸಂಭವಿಸಿದ ಭೂಕುಸಿತದಲ್ಲಿ 57 ಜನ ನಾಪತ್ತೆಯಾಗಿದ್ದರು. ಇದರಲ್ಲಿ 27 ಜನ ಮೃತದೇಹ ಪತ್ತೆಯಾಗಿದೆ. ಉತ್ತರಾಖಂಡದ ಜೋಶಿಮಠದಲ್ಲೂ ಸಂಭವಿಸಿದ್ದ ಭೂಕುಸಿತ ಭಾರೀ ಸುದ್ದಿಯಾಗಿತ್ತು.
ಉತ್ತರಾಖಂಡದ ಗೌರಿಕುಂಡದಲ್ಲಿ 2023ರ ಆಗಸ್ಟ್‌ನಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಹೀಗೆ ಭಾರತದಲ್ಲಿ 2015ರಿಂದ 2022ರವರೆಗೆ ದೇಶದಲ್ಲಿ ಒಟ್ಟು 3,782 ಭೂಕುಸಿತ ಪ್ರಕರಣಗಳು ದಾಖಲಾಗಿವೆ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.