ಬೆಂಗಳೂರು: ಕಳೆದ 20 ವರ್ಷಗಳಲ್ಲಿ ದಾಖಲೆಗಳ ಪ್ರಕಾರ ದಕ್ಷಿಣದ ರಾಜ್ಯಗಳಲ್ಲಿ ಭೂಕುಸಿತ ಪ್ರಮಾಣ ಏರುಗತಿಯಲ್ಲಿದೆ. ಪ್ರತಿಕೂಲ ಹವಾಮಾನ, ಅಕಾಲಿಕ ಹಾಗೂ ಅಸಮರ್ಪಕ ಮಳೆ ಮತ್ತು ಅತಿಯಾದ ಮಾನವನ ಹಸ್ತಕ್ಷೇಪದಿಂದಾಗಿ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ ಸಾಮಾನ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
2015ರಿಂದ 2022ರವರೆಗೆ ದೇಶದಲ್ಲಿ ಒಟ್ಟು 3,782 ಭೂಕುಸಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2,239 ಪ್ರಕರಣಗಳು ಕೇರಳದಲ್ಲೇ ಸಂಭವಿಸಿವೆ. ನಂತರದ ಸ್ಥಾನ ಪಶ್ಚಿಮ ಬಂಗಾಳದಲ್ಲಿ (376), ತಮಿಳುನಾಡು ಹಾಗೂ ಕರ್ನಾಟಕದಲ್ಲಿ ತಲಾ 196, ಜಮ್ಮು ಮತ್ತು ಕಾಶ್ಮೀರದಲ್ಲಿ 184 ಭೂಕುಸಿತಗಳು ಸಂಭವಿಸಿವೆ ಎಂದು ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯಾದ ದಾಖಲೆಗಳು ಹೇಳುತ್ತವೆ.
ಇದರ ಪರಿಣಾಮ ದೇಶದ ಒಟ್ಟು ಭೂಪ್ರದೇಶದ ಶೇ 4.3ರಷ್ಟು ಭೂಮಿ ಅಪಾಯದಲ್ಲಿದೆ. ಇಲ್ಲಿ ಯಾವಾಗ ಬೇಕಾದರೂ ಭೂಮಿ ಕುಸಿಯುವ ಅಪಾಯ ಹೆಚ್ಚು. ಇದರಲ್ಲಿ ಅರುಣಾಚಲ ಪ್ರದೇಶದಲ್ಲಿ 71 ಸಾವಿರ ಚದರ ಕಿ.ಮೀ., ಹಿಮಾಚಲ ಪ್ರದೇಶದಲ್ಲಿ 42 ಸಾವಿರ ಚದರ ಕಿ.ಮೀ., ಲಡಾಖ್‌ನಲ್ಲಿ 40 ಸಾವಿರ ಚದರ ಕಿ.ಮೀ., ಉತ್ತರಾಖಂಡದಲ್ಲಿ 39 ಸಾವಿರ ಚದರ ಕಿ.ಮೀ., ಕರ್ನಾಟಕದಲ್ಲಿ 31 ಸಾವಿರ ಚದರ ಕಿ.ಮೀ. ಭೂಪ್ರದೇಶದಲ್ಲಿ ಭೂಕುಸಿತದ ಸಂಭವ ಹೆಚ್ಚು ಎಂದು ಜಿಯಲಜಿಕಲ್ ಸರ್ವೆ ಆಫ್ ಇಂಡಿಯಾ ಹೇಳಿದೆ.
ಭೂಕುಸಿತದ ಪರಿಣಾಮ ಅರುಣಾಚಲ ಪ್ರದೇಶವು 257 ಚದರ ಕಿ.ಮೀ. ಪ್ರದೇಶವನ್ನು ಈವರೆಗೂ ಕಳೆದುಕೊಂಡಿದೆ. ಮಣಿಪುರ– 249 ಚದರ ಕಿ.ಮೀ., ನಾಗಾಲ್ಯಾಂಡ್ 235 ಚದರ ಕಿ.ಮೀ., ಮೀಜೊರಾಂ– 186 ಚದರ ಕಿ.ಮೀ., ಮೇಘಾಲಯ– 73 ಚದರ ಕಿ.ಮೀ. ಪ್ರದೇಶವನ್ನು ಕಳೆದುಕೊಂಡಿದೆ ಎಂದು ದಾಖಲೆಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.