ವಯನಾಡ್: ವಯನಾಡ್ ಭೂಕುಸಿತದಿಂದಾಗಿ ಸಂತ್ರಸ್ತರಾಗಿರುವ 778 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಕೇರಳ ಸರ್ಕಾರ ಶನಿವಾರ ತಿಳಿಸಿದೆ.
ಪರಿಹಾರ ಶಿಬಿರಗಳಲ್ಲಿ ಇದ್ದ ಈ ಎಲ್ಲ ಕುಟುಂಬಗಳನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರದ ಪ್ರಕಟಣೆಯ ಪ್ರಕಾರ ಒಟ್ಟು 2,569 ಮಂದಿಯನ್ನು ಸರ್ಕಾರಿ ಮನೆ (ಕ್ವಾರ್ಟರ್ಸ್) ಮತ್ತು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ಏತನ್ಮಧ್ಯೆ ವಯನಾಡ್‌ನಲ್ಲಿ ಜುಲೈ 30ಕ್ಕೆ ಸಂಭವಿಸಿದ್ದ ಭೂಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಮಗ್ರ ಮನವಿಯನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಮೊದಲು ನೈಸರ್ಗಿಕ ವಿಪತ್ತು ಸಂಭವಿಸಿದ ವಯನಾಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಪರಿಹಾರ ಹಾಗೂ ಪುನರ್ವಸತಿಗಾಗಿ ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದರು.
ಪುನರ್ವಸತಿಗೊಂಡಿರುವ ಕುಟುಂಬಗಳಿಗೆ 'ಬ್ಯಾಕ್ ಟು ಹೋಮ್' ಕಿಟ್ ನೀಡುವ ಕಾರ್ಯ ಆರಂಭಿಸಲಾಗಿದೆ ಎಂದು ಸರ್ಕಾರ ಪ್ರಕಣೆಯಲ್ಲಿ ತಿಳಿಸಿದೆ. ಇದರಲ್ಲಿ ಪೀಠೋಪಕರಣಗಳು, ಕಿಚನ್ ಕಿಟ್, ಆಹಾರ ಸಾಮಗ್ರಿ ಕಿಟ್, ನೈರ್ಮಲ್ಯ ಕಿಟ್ ಒಳಗೊಂಡಿರಲಿವೆ.
ವಯನಾಡ್ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 119 ಮಂದಿ ನಾಪತ್ತೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.