ಕಲ್ಪೆಟ್ಟ (ವಯನಾಡು ಜಿಲ್ಲೆ): ಸರಿಯಾಗಿ ಒಂದು ವಾರದ ಹಿಂದೆಯೇ ಉರುಳಿ ಬಿದ್ದಂತಹ ಮಹಾ ಸದ್ದಿಗೆ ಬೆದರಿ ಪ್ರಾಣ ಉಳಿದರೆ ಸಾಕು ಕಾಡು–ಗುಡ್ಡದತ್ತ ಓಡಿದವರು ತಮ್ಮೂರು ನೋಡಲು ಮಂಗಳವಾರ ಬಂದರು. ಅಳಿದುಳಿದಿದ್ದು ಸೊಗಸು ಕಳೆದುಕೊಂಡು ಮೈಚಾಚಿ ಬಿದ್ದಿರುವುದನ್ನು ಕಂಡು ಅವರೆಲ್ಲರೂ ಕಣ್ಣೀರಾದರು.
ಜುಲೈ 29 ರಂದು ತಡರಾತ್ರಿ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಜಿರಿಮಟ್ಟಂ ಭಾಗಗಳಲ್ಲಿ ಸಂಭವಿಸಿದ ಭೂಕುಸಿತದ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಂಡು ವಿವಿಧ ಕಾಳಜಿ ಕೇಂದ್ರಗಳಲ್ಲಿ ಕಳೆಯುತ್ತಿರುವವರು ಮೇಲಕ್ಕೆ ಕೆಲವರಿಗೆ ತಾವಿದ್ದ ಮನೆಗಳಿಗೆ ತೆರಳಲು ಅವಕಾಶ ಲಭಿಸಿತ್ತು. ಆದರೆ ಬಂದವರ ಬಹುತೇಕರ ಮನೆಯ ಕುರುಹು ಕೂಡ ಇರಲಿಲ್ಲ. ಸ್ಥಳದ ದಾರಿ ಇಲ್ಲ, ಸಂಜೆ ಕುಳಿತು ಸುಖ–ದುಃಖ ಹಂಚಿಕೊಂಡ ಕಟ್ಟೆ ಇರಲಿಲ್ಲ. ಮುದ ನದಿ ನೀಡಿದ, ಸಾಮಗ್ರಿ ಅಂಗಡಿ ಯಾವುದೂ ಇರಲಿಲ್ಲ.
ಮೇಪ್ಪಾಡಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಿಂದ ಜಯೇಶ್, ಯಶೋದಾ ಮತ್ತು ಮಕ್ಕಳು ಅಪರ್ಣಾ ಹಾಗೂ ಅಕ್ಷಯ, ಚೂರಲ್‌ಮಲ ಶಾಲೆಯ ಬಳಿ ತಮ್ಮ ಮನೆ ಇದ್ದ ಜಾಗವನ್ನು ಹುಡುಕಿದರು. ಕೊನೆಗೆ ಹೇಗೋ ಅಲ್ಲಿಗೆ ತಲುಪಿ ನೋಡಿದಾಗ ಮುರಿದು ಬಿದ್ದ ಮನೆಯ ಒಳಗೆ ಕಂಡದ್ದು ಪ್ರಶಸ್ತಿಗಳು ಮತ್ತು ಹಿರಿಯರ ಭಾವಚಿತ್ರ ಮಾತ್ರ.
ಅಪರ್ಣಾ ಅವರ ಸ್ನಾತಕೋತ್ತರ ಪದವಿ ಮತ್ತು ಅಕ್ಷಯ ಅವರ ಪದವಿ ಮುಗಿದಿದೆ. ಕಾಲೇಜು ದಿನಗಳಲ್ಲಿ ಅಕ್ಷಯ ಗೆದ್ದ ಬಹುಮಾನಗಳಲ್ಲಿ ಕೆಲವು ಮನೆ ಇದ್ದ ಜಾಗದಲ್ಲಿ ಬಿದ್ದಿದ್ದವು. ಅವರನ್ನು ಹೆಕ್ಕಿ ಎದೆಗವುಚಿಕೊಂಡು ಗಳಗಳನೆ ಅತ್ತರು. ಅಜ್ಜಿಯ ಭಾವಚಿತ್ರ ಎತ್ತಿಕೊಂಡ ಅಪರ್ಣಾ ಅವರಿಗೂ ಬೇಸರ ತಡೆಯಲಾಗಲಿಲ್ಲ. ಅಷ್ಟು ತಡೆದು ನಿಲ್ಲಿಸಿದ ಜಯೇಶ್ ಮತ್ತು ಯಶೋದಾ ಅವರ ಮುಂದೆ ಕಟ್ಟೆಯೂ ಒಡೆಯಿತು. ನಿಮಿಷಾರ್ಧದಲ್ಲಿ ವಾತಾವರಣವಿಡೀ ಶೋಕಮಯವಾಯಿತು.
ಹ್ಯಾರಿಸನ್ಸ್ ಮಲಯಾಳಂ ಚಹಾ ಎಸ್ಟೇಟ್‌ನಲ್ಲಿ ಕೆಲಸ ಮಾಡಿ ಸಂಪಾದಿಸಿದ ಹಣದಲ್ಲಿ ಮೂರು ಹಿಂದೆ ಜಯೇಶ್ ಮನೆ ಕಟ್ಟಿದ್ದರು. 'ಈಗ ಎಲ್ಲವೂ ಇರುವುದಿಲ್ಲ, ಸುತ್ತಮುತ್ತ ಇದ್ದವರೆಲ್ಲರೂ ಹೋದರು. ಈ ದುರಂತದ ಮನಸ್ಸಿನಿಂದ ಮಾಸಿ ಹೋಗುವಷ್ಟು ಕಾಲ ಬೇಕಾದೀತೋ...' ಎಂದು ಕಣ್ಣೀರು ಒರೆಸುತ್ತಲೇ ಹೇಳಿದರು ಜಯೇಶ್.
'ಮೊದಲ ಕುಸಿತ ಆದ ಕೂಡಲೇ ಮನೆಯ ಬಳಿ ಕೆಸರು ಮಿಶ್ರಿತ ನೀರು ಬಂದಿತ್ತು. ಅಪಾಯದ ಸೂಚನೆ ಅರಿತು ಎಲ್ಲರೂ ಓಡಿದೆವು. ಸ್ಟ್ರೋಕ್ ಆಗಿ ಚಿಕಿತ್ಸೆ ಪಡೆದು ಬಂದಿದ್ದ ಅಪ್ಪನನ್ನು ಎತ್ತಿಕೊಂಡು ಪತಿ ಗುಡ್ಡದ ಕಡೆಗೆ ಹೆಜ್ಜೆ ಹಾಕಿದರು. ಜೀವ ಉಳಿಸುವ ಪ್ರಯತ್ನದಲ್ಲಿ ಎಲ್ಲರನ್ನೂ ಬಿಟ್ಟು ಹೊರಟಿದ್ದೆವು. ದಾಖಲೆಗಳು ಮತ್ತು ಮಕ್ಕಳ ಪ್ರಮಾಣಪತ್ರಗಳೆಲ್ಲವೂ ನಾಶವಾಗುತ್ತವೆ. ಇನ್ನೊಮ್ಮೆ ಬದುಕು ಕಟ್ಟಿಕೊಳ್ಳುವುದು ಬಹಳ ಕಠಿಣ' ಎಂದು ಯಶೋದಾ ಹೇಳಿದರು.
ಜಿವಿಎಚ್ ಎಸ್ ಶಾಲೆಯ ಹಿಂದೆ ಎತ್ತರ ಪ್ರದೇಶದಲ್ಲಿ ವಾಸವಾಗಿದ್ದ ಮಹಮ್ಮದ್ ಕುಟ್ಟಿ ಮೊಮ್ಮಗ ಹೃಸ್ವಾನ್ ಜೊತೆ ಬಂದಿದ್ದರು. ದುರಂತ ನಡೆದಂದು ಅವರು ಮನೆಯ ಎದುರಿನ ಕಾಂಪೌಂಡ್ ಒಡೆದು ನೀರುನುಗ್ಗಿದ್ದನ್ನು ಕಂಡು ಕುಟುಂಬದವರನ್ನು ಕರೆದುಕೊಂಡು ಹಿಂಬಾಗಿಲಿನಿಂದ ಓಡಿದ್ದರು. ಮಂಗಳವಾರ ಬಂದು ನೋಡಿದಾಗ ಮನೆಯ ಎದುರು ಭಾರಿ ಗಾತ್ರದ ಮರಗಳು ಬಂದು ಬಿದ್ದಿದ್ದವು.
'ಮನೆಯ ಮುಂದೆ ನಿಂತು ನೋಡಿದರೆ ಎಲ್ಲರ ನಲಿವು ಕಾಣುತ್ತಿದೆ. ದೂರದಲ್ಲಿ ಹರಿಯುತ್ತಿದ್ದ ನದಿ ಖುಷಿ ನೀಡುತ್ತಿತ್ತು. ಸುತ್ತ ಚಹಾತೋಟ ನೋಡುತ್ತ ಚಹಾ ಸೇವಿಸಿದರೆ ಸುಖವಿತ್ತು. ಎತ್ತರದ ಮುಂಡಕ್ಕೈಯತ್ತ ಕಣ್ಣು ಹಾಯಿಸಿದರೆ ಮಂಜು ಮುಸುಕಿದ ಪುಂಜಿರಿಮಟ್ಟಂ ವಾತಾವರಣ ಸೃಷ್ಟಿಸುತ್ತದೆ. ಅದೇ ಗುಡ್ಡ ಕುಸಿದು ಬಂದು ಎಲ್ಲೇ ಎಳೆದುಕೊಂಡು ಹೋಗಿದೆ. ಇದಕ್ಕೆ ಏನೆನ್ನಲಿ’ ಎಂದು ಹೇಳಿ ಮಹಮ್ಮದ್ ಕುಟ್ಟಿ ತಲೆಯ ಮೇಲೆ ಕೈಹೊತ್ತುಕೊಂಡರು.
ತುಂಬ ಸೌಹಾರ್ದದ ವಾತಾವರಣ ಇದ್ದ ಊರು ಇದು. ಧರ್ಮಗಳ ಗೋಡೆ ಇಲ್ಲಿರಲಿಲ್ಲ. ಎಲ್ಲರೂ ಜೊತೆಯಾಗಿ ದಿನ ಕಳೆಯುತ್ತಿ ದ್ದೆವು. ಈಗ ಅವರು ಯಾರೂ ಇಲ್ಲಮಹಮ್ಮದ್ ಕುಟ್ಟಿ, ಚೂರಲ್‌ಮಲ ಶಾಲೆ ಬಳಿಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.