ವಯನಾಡು ಭೂಕುಸಿತ ದುರಂತದಿಂದ ಪೋಷಕರನ್ನು ಕಳೆದುಕೊಂಡಿರುವ ಬಾಲಕಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಮನಕಲಕುವ ಸನ್ನಿವೇಶದ ಬಗ್ಗೆ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಡಾ. ಮೂಪೆನ್ ಆಸ್ಪತ್ರೆಗೆ ಭೇಟಿ ನೀಡಿದ್ದ ತರೂರ್, ಆಸ್ಪತ್ರೆಯ ಹಾಸಿಗೆ ಮೇಲೆ ಕುಳಿತ ಬಾಲಕಿಯೊಬ್ಬಳು ಬಣ್ಣವಿಲ್ಲದ ಚಿತ್ರಗಳಿಗೆ ರಂಗು ತುಂಬುತ್ತಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮವರನ್ನು ಕಳೆದುಕೊಂಡವರ ಗೋಳಾಟ, ಗಾಯಗೊಂಡವರ ಚೀರಾಟದ ನಡುವೆ, ಖಾಲಿ ಚಿತ್ರಗಳಿಗೆ ಜೀವ ನೀಡುುತ್ತಾ ನೋವು ಮರೆಯುತ್ತಿದ್ದ ಆ 'ಬಾಲಕಿಗೆ ಒಳಿತಾಗಲಿ' ಎಂದು ಆಶಿಸಿದ್ದಾರೆ.
'ವಯನಾಡು ಭೂಕುಸಿತದಲ್ಲಿ ಬದುಕುಳಿದವರನ್ನು ಭೇಟಿ ಮಾಡುವ ಸಲುವಾಗಿ ಡಾ. ಮೂಪೆನ್ ಆಸ್ಪತ್ರೆಗೆ ಭೇಟಿ ನೀಡಿದ್ದೆ. ದುರಂತದಲ್ಲಿ ತನ್ನ ತಂದೆ–ತಾಯಿ, ಸಹೋದರ–ಸಹೋದರಿ, ಅಜ್ಜ–ಅಜ್ಜಿಯನ್ನು ಕಳೆದುಕೊಂಡಿರುವ ಹಾಗೂ ಮೂಳೆ ಮುರಿದುಕೊಂಡಿರುವ 8 ವರ್ಷದ ಬಾಲಕಿ ಅವಂತಿಕಾಳನ್ನು ಮಾತನಾಡಿಸಲು ಹೋದೆ. ಆದರೆ, ಆಕೆ ಹಾಸಿಗೆ ಮೇಲೆ ಕುಳಿತು ಪುಸ್ತಕಕ್ಕೆ ಬಣ್ಣ ತುಂಬುವುದರಲ್ಲಿ ತಲ್ಲೀನಳಾಗಿದ್ದಳು. ಊಹಿಸಿಕೊಳ್ಳಲೂ ಸಾಧ್ಯವಾಗದ ಎಂತಹ ಭಯಾನಕ ಸನ್ನಿವೇಶವನ್ನು ಆ ಮಗು ಅನುಭವಿಸಿದೆ. ಆಕೆಗೆ ಒಳಿತಾಗಲಿ' ಎಂದು ಬರೆದುಕೊಂಡಿದ್ದಾರೆ.
ವಯನಾಡು ಜಿಲ್ಲೆಯಾದ್ಯಂತ ಸಂಭವಿಸಿರುವ ಸರಣಿ ಭೂಕುಸಿತದಿಂದಾಗಿ ಇದುವರೆಗೆ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಮಂದಿ ಕುಳಿತ ಹಾಗೆಯೇ, ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿರುವ ಸಂಗತಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರಿಂದ ಬೆಳಕಿಗೆ ಬಂದಿದೆ.
ನಾಪತ್ತೆಯಾಗಿರುವ ನೂರಾರು ಮಂದಿಗಾಗಿ ಸತತವಾಗಿ ಹುಡುಕಾಟ ನಡೆಯುತ್ತಿದೆ. ಸ್ವಯಂ ಸೇವಕರೂ ಸೇರಿದಂತೆ ಸಾವಿರಾರು ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.