ಕಲ್ಪೆಟ್ಟ (ವಯನಾಡ್ ಜಿಲ್ಲೆ): ಎಂದೋ ಒಮ್ಮೆ ಇವರು ಪರಸ್ಪರ ಕಂಡಿರಬಹುದು, ನಸುನಗೆ ವಿನಿಮಯ ಮಾಡಿಕೊಂಡಿರಬಹುದು, ಮಾತನಾಡಿರಲೂಬಹುದು, ಸುಂದರ ಸಂಜೆಗಳಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಕುಳಿತು ಚಹಾ ಸವಿದಿರಬಹುದು. ಇವರು ನೆರೆಹೊರೆಯ ನಿವಾಸಿಗಳೂ ಆಗಿರಬಹುದು. ಆದರೆ ಇಲ್ಲಿ ಎಲ್ಲರೂ ಅಪರಿಚಿತರೇ. ಇವರೆಲ್ಲರೂ ಜೊತೆಯಾಗಿ ಚಿರನಿದ್ರೆಗೈಯ್ಯುತ್ತಿರುವ ಚಹಾ ತೋಟದ ಸುಂದರ ತಾಣವಿನ್ನು ದುರಂತದ ಸ್ಮಾರಕ.
ಮೇಪ್ಪಾಡಿ ಗ್ರಾಮ ಪಂಚಾಯಿತಿಯ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಜಿರಿಮಟ್ಟಂ ಪ್ರದೇಶಗಳಲ್ಲಿ ಕಳೆದ ಮಂಗಳವಾರ ಮಧ್ಯರಾತ್ರಿ ಪ್ರಕೃತಿ ತಾಂಡವವಾಡಿ ಕೆಸರು ನೀರಿನಲ್ಲಿ ಎಳೆದುಕೊಂಡು ಹೋಗಿ ಒಂದಿನಿತೂ ಗುರುತು ಸಿಗದ ಮೃತದೇಹಗಳು ಕೊನೆಗೂ ಪುತ್ತುಮಲದ ಮಣ್ಣಿನಲ್ಲಿ ಲೀನವಾಗಿವೆ.
ಹ್ಯಾರಿಸನ್ಸ್ ಮಲಯಾಳಂ ಚಹಾತೋಟದ ಮಾಲೀಕರು ಉಚಿತವಾಗಿ ನೀಡಿದ 64 ಸೆಂಟ್ ಜಾಗ ಈಗ ಸರ್ವಧರ್ಮದ ಸ್ಮಶಾನವಾಗಿದ್ದು ಗುರುತು ಪತ್ತೆಯಾಗದ 35 ಮೃತದೇಹಗಳನ್ನು ಭಾನುವಾರ ಮತ್ತು ಸೋಮವಾರ ಹೂಳಲಾಗಿದೆ. ದೇಹದ ಭಾಗಗಳನ್ನು ಕೂಡ ಇಲ್ಲಿ ಮಣ್ಣು ಮಾಡಲಾಗಿದೆ. ನಾಪತ್ತೆಯಾದವರ ಸಂಬಂಧಿಕರು ಈ ‘ಅಪರಿಚಿತರಲ್ಲಿ’ ತಮ್ಮವರು ಇರುವರು ಎಂಬ ಭಾವದಿಂದ ಇನ್ನು ಇಲ್ಲಿ ಅಂತಿಮ ವಿದಾಯ ಹೇಳಬಹುದಾಗಿದೆ.
ಮಣ್ಣಿನಡಿಯಲ್ಲೂ ಬಂಡೆಗಳ ಎಡೆಯಲ್ಲೂ ಕಾಡಿನ ಅಂಚಿನಲ್ಲೂ ನದಿಯ ಒಡಲಿನಲ್ಲೂ ಸಿಕ್ಕಿದ್ದ ಈ ಮೃತದೇಹಗಳು ಈಗ ಮತ್ತೊಂದು ದುರಂತ ಭೂಮಿಯನ್ನು ಸೇರಿವೆ. 2019ರಲ್ಲಿ ಸಂಭವಿಸಿದ ಪುತ್ತುಮಲ ದುರಂತದಲ್ಲಿ 17 ಮಂದಿಯನ್ನು ಈ ಜಾಗದ ಮೂಲಕ ಗುಡ್ಡದ ನೀರು ಎಳೆದೊಯ್ದು ಚಾಲಿಯಾರ್ ನದಿಗೆ ಎಸೆದಿತ್ತು. ಅಂದು ನಾಪತ್ತೆಯಾದವರಲ್ಲಿ ಐದು ಮಂದಿಯ ದೇಹಗಳು ಪತ್ತೆಯಾಗಲಿಲ್ಲ. ದುರಂತಕ್ಕೆ ಮೊದಲು ಇಲ್ಲಿ ದೇವಸ್ಥಾನ ಮತ್ತು ಮಸೀದಿ ಇತ್ತು. ಈಗ ಈ ಸ್ಥಳವು ಮತ್ತೊಂದು ದುರಂತದಲ್ಲಿ ಜೀವ ಕಳೆದುಕೊಂಡವರ ‘ವಿಶ್ರಾಂತಿ ತಾಣ’ವಾಗಿದೆ.
ಸರ್ವಧರ್ಮದ ಪ್ರಾರ್ಥನೆ ಸೇರಿದಂತೆ ಸಕಲ ಗೌರವ ಪಡೆದಿರುವ ಮೃತದೇಹಗಳು ಮತ್ತು ದೇಹದ ಭಾಗಗಳ ನಡುವೆ ಜಾತಿ, ಧರ್ಮದ ಭೇದವಿಲ್ಲ. ಆಸ್ತಿ, ಮನೆ, ಅಂತಸ್ತು ಮುಂತಾದ ಗೋಡೆಗಳೂ ಇಲ್ಲ.
ದುರಂತ ಸಂಭವಿಸಿದ ಚೂರಲ್‌ಮಲ ಭಾಗಕ್ಕೆ ಮೇಪ್ಪಾಡಿ ಪಟ್ಟಣದಿಂದ ಹೋಗುವ ಹಾದಿಯ ಸುಮಾರು ಎಂಟು ಕಿಲೊಮೀಟರ್ ದೂರದಲ್ಲಿ ಈ ಜಾಗವಿದೆ. ಮಣ್ಣು ಮಾಡಿರುವ ಜಾಗದಲ್ಲಿ ಪ್ರತಿ ಮೃತದೇಹ ಮತ್ತು ದೇಹದ ಭಾಗಗಳ ಜಾಗದಲ್ಲಿ ಸಿಮೆಂಟ್ ಕಲ್ಲೊಂದನ್ನು ಇರಿಸಲಾಗಿದ್ದು ಅದರಲ್ಲಿ ಡಿಎನ್‌ಎ ಪರೀಕ್ಷೆಯ ಮಾಹಿತಿಗೆ ಸಂಬಂಧಿಸಿದ ಸಂಖ್ಯೆಯೊಂದನ್ನು ನಮೂದಿಸಲಾಗಿದೆ.
ಆಭರಣಗಳು ಮತ್ತು ಅದರ ಚಿತ್ರವನ್ನು ತೆಗೆದಿರಿಸಲಾಗಿದ್ದು ಭವಿಷ್ಯದಲ್ಲಿ ಯಾರಾದರೂ ಇದು ತಮ್ಮವರದು ಎಂದು ಸಾಬೀತು ಮಾಡಿದರೆ ಇಲ್ಲಿಂದ ಶವವನ್ನು ಎತ್ತಿ ತಮ್ಮ ಧರ್ಮದ ಆಚಾರದ ಪ್ರಕಾರ ಅಂತಿಮ ಸಂಸ್ಕಾರ ಮಾಡಲು ಅವಕಾಶವಿದೆ. ಇದಕ್ಕೆ ಡಿಎನ್‌ಎ ಹೊಂದಿಕೆಯಾಗಬೇಕು.
ಗುರುತು ಪತ್ತೆಯಾಗದ 8 ಮೃತದೇಹಗಳನ್ನು ಭಾನುವಾರ ಮತ್ತು 29 ಮೃತದೇಹಗಳನ್ನು ಸೋಮವಾರ ಮಣ್ಣುಮಾಡಲಾಯಿತು. ಒಟ್ಟು 164 ಅಂಗಾಗಗಳೂ ಇಲ್ಲಿ ಮಣ್ಣು ಸೇರಿದವು. ಭಾನುವಾರ ಪುತ್ತುಮಲ ಪ್ರದೇಶಕ್ಕೆ ತರಲು ಸಜ್ಜು ಮಾಡಿದ್ದ ಒಂದು ಮೃತದೇಹದ ಗುರುತನ್ನು ಕೊನೆಯ ಕ್ಷಣದಲ್ಲಿ ಸಂಬಂಧಿಕರು ಪತ್ತೆ ಮಾಡಿದ್ದು ಅದನ್ನು ಅವರಿಗೆ ಹಸ್ತಾಂತರಿಸಲಾಯಿತು.
ತೀರಿಹೋದವರೆಲ್ಲರೂ ಚೂರಲ್‌ಮಲ, ಮುಂಡಕ್ಕೈ ಭಾಗದವರು. ಅಲ್ಲಿನ ಜನರಿಗೆ ಗೌರವ ಸಲ್ಲಿಸಲು ಅನುಕೂಲ ಆಗಲಿ ಎಂಬ ಕಾರಣಕ್ಕೆ ಈ ಜಾಗ ಆಯ್ಕೆ ಮಾಡಲಾಗಿದೆನಾಸರ್, ಮೇಪ್ಪಾಡಿ ಗ್ರಾ.ಪಂ ಸ್ಥಾಯಿ ಸಮಿತಿ ಸದಸ್ಯ
2019ರಲ್ಲಿ ಸಂಭವಿಸಿದ ದುರಂತದಲ್ಲಿ 17 ಜನರು ಸಾವಿಗೀಡಾಗಿದ್ದರು. ಕಾಫಿ, ಚಹಾ ಮತ್ತು ಏಲಕ್ಕಿ ತೋಟವೂ ಇಲ್ಲದಾಗಿತ್ತು. ಈ ಜಾಗದಲ್ಲಿ ಈಗ ಮತ್ತೊಂದು ನೋವುಮುತ್ತಲಿಬ್ ತಾಞಿಲೋಡ್, ಸ್ಥಳೀಯ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.