ವಯನಾಡ್: ಭೂಕುಸಿತದಿಂದಾಗಿ ಸ್ಮಶಾನ ಭೂಮಿಯಂತಾಗಿರುವ ವಯನಾಡ್‌ನಲ್ಲಿ ನೊಂದ ಜನರ ಸಹಾಯಕ್ಕಾಗಿ ಸ್ವಯಂ ಸೇವಕರ ಹಲವು ತಂಡಗಳು ಕೆಲಸ ಮಾಡುತ್ತಿವೆ. ಈ ನಡುವೆದುರಂತ ಪೀಡಿತ ಮೇಪ್ಪಾಡಿಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ನಿರಾಶ್ರಿತ ಶಿಬಿರಗಳಲ್ಲಿ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ.
ಶಾಲಾ ಶಿಕ್ಷಕರು ಕೂಡ ಅವರಿಗೆ ಬೆಂಬಲ ನೀಡಿ, ಹುರಿದುಂಬಿಸಿ ಅವರನ್ನು ಉತ್ತೇಜಿಸುತ್ತಿದ್ದಾರೆ. ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿಗೆ ಸೇರಿದ ವಿದ್ಯಾರ್ಥಿಗಳು ಸೇವಾ ಚಟುವಟಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂತ್ರಸ್ತರ ನೋವು, ಸಂಕಟಗಳ ನಡುವೆ ವಿದ್ಯಾರ್ಥಿಗಳ ಈ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ.
ಸೇವೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಸಂತ್ರಸ್ತರಿಗೆ ದೈಹಿಕವಾಗಿ ಸಹಾಯ ಮಾಡುತ್ತಿದ್ದಾರಲ್ಲದೇ, ಅವರಿಗೆ ಮಾನಸಿಕ ಬೆಂಬಲವನ್ನೂ ನೀಡುತ್ತಿದ್ದಾರೆ. ಕಣ್ಣೀರಿಡುವವರಿಗೆ ಸಾಂತ್ವನ ಹೇಳುತ್ತಿದ್ದಾರೆ.
‘ಇಲ್ಲಿರುವ ಜನರೆಲ್ಲರೂ ನಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರು. ಈ ಘಟನೆಯಿಂದ ನಮಗೆ ಅತೀವ ನೋವಾಗಿದೆ. ಇವರಿಗೆ ಸಹಾಯ ಮಾಡಲು ಸಮಾಧಾನವಾಗುತ್ತಿದೆ’ ಎಂದು ಸೇವಾ ಕಾರ್ಯದಲ್ಲಿ ತೊಡಗಿರುವ ವಿದ್ಯಾರ್ಥಿನಿ ಅಲ್‌ಡ್ರಿಯಾ ಹೇಳಿದರು.
‘ಎನ್.ಸಿ.ಸಿ.ಯ ಸ್ವಯಂ ಸೇವಕಿಯಾಗಿ ಇಲ್ಲಿ ಕೈಗೆ ಕೈ ಜೋಡಿಸಿ ಕೆಲಸ ಮಾಡಲು ನಾನು ಬದ್ಧಳಾಗಿದ್ದೇನೆ. ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ.ಯಿಂದ ಮಾತ್ರವಲ್ಲ ನಮ್ಮ ಶಾಲೆಯ ಬೇರೆ ವಿದ್ಯಾರ್ಥಿಗಳೂ ಕೂಡ ಇಲ್ಲಿ ಸ್ವಯಂ ಸೇವಕರಾಗಿದ್ದಾರೆ’ ಎನ್ನುವುದು ವಿದ್ಯಾರ್ಥಿನಿ ಅನಂತ ಮೇಘಾ ಮಾತು.
ಸಂತ್ರಸ್ತರಿಗೆ ಬಂದ ಬಟ್ಟೆಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿ ಮೆಲ್ಬಿನ್ ಹೇಳಿದರು.
‘ಜನರಿಗೆ ನಮ್ಮಿಂದ ಮಾಡಲು ಸಾಧ್ಯವಾಗಿದ್ದನ್ನು ಮಾಡುತ್ತಿದ್ದೇವೆ. ವಯನಾಡ್‌ಗಾಗಿ ನಾವು ಪ್ರಾರ್ಥಿಸುತ್ತೇವೆ’ ಎಂದು ಮೇಪ್ಪಾಡಿ ಶಾಲೆಯ ಶಿಕ್ಷಕಿ ಮಿನಿ ಎಂಬವರು ಹೇಳಿದರು.
‘ಇದೊಂದು ದುರಂತ. ನಾವೆಲ್ಲಾ ದುಃಖಿತರಾಗಿದ್ದೇವೆ. ಇಲ್ಲಿಗೆ ಬರಲು ಎಲ್ಲರಿಗೂ ಅವಕಾಶ ಇಲ್ಲ. ನಿರ್ಬಂಧಗಳಿವೆ. ಸಂತ್ರಸ್ತರು ಭಾವುಕರಾಗಿದ್ದಾರೆ. ಸ್ನೇಹ, ಪ್ರೀತಿಯನ್ನು ನೀಡುವ ಮೂಲಕ ಅವರನ್ನು ನಾವು ಸಂತೈಸುತ್ತಿದ್ದೇವೆ. ಅವರಿಗೆ ಪುನರ್ವಸತಿ ಕಲ್ಪಿಸುವುದು ಹೇಗೆ? ಇಲ್ಲಿನ ಪರಿಸ್ಥಿತಿ ಕಠಿಣವಾಗಿದೆ’ ಎಂದು ಶಿಕ್ಷಕಿ ಮಿನಿ ಬೇಸರಿಸಿದರು.
‘ನಮ್ಮಿಂದ ಸಾಧ್ಯವಾಗುವುದೆಲ್ಲಾ ಮಾಡುತ್ತಿದ್ದೇವೆ. ನಮ್ಮ ಸೇವೆ ಅಲ್ಪವಷ್ಟೇ. ವಿದ್ಯಾರ್ಥಿಗಳು ಬಟ್ಟೆಗಳನ್ನೆಲ್ಲಾ ವಿಂಗಡಿಸಿ ಸಂತ್ರಸ್ತರಿಗೆ ನೀಡುತ್ತಿದ್ದಾರೆ. ನಮ್ಮ ಕೆಲವು ವಿದ್ಯಾರ್ಥಿಗಳನ್ನೂ ಕಳೆದುಕೊಂಡಿದ್ದೇವೆ. ಅವರ ಪತ್ತೆ ಸಾಧ್ಯವಾಗಿಲ್ಲ. ಹೈಯರ್ ಸೆಕೆಂಡರಿ ಶಾಲೆಯಲ್ಲಿ 6 ಕೊಠಡಿಗಳಿವೆ. ಹೈಸ್ಕೂಲ್‌ನಲ್ಲಿ ಇನ್ನೂ ಹೆಚ್ಚಿನ ಸ್ಥಳ ಇದೆ. ಕ್ಯಾಂಪ್‌ನಲ್ಲಿ ಸುಮಾರು 1000 ಮಂದಿ ಇರಬಹುದು. ನಾವು ಅವರಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಜಗತ್ತಿನ ಪ್ರತಿಯೊಬ್ಬರೂ ಕೇರಳ ಹಾಗೂ ವಯನಾಡ್‌ಗಾಗಿ ಪ್ರಾರ್ಥಿಸುತ್ತಿದ್ದಾರೆ’ ಎಂದು ಶಿಕ್ಷಕಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.