ಕಲ್ಪೆಟ್ಟ (ವಯನಾಡ್ ಜಿಲ್ಲೆ): ಪರ್ವತದ ಒಡಲು ಪೂರ್ತಿ ಒಡೆದು ಹೊರಬಂದಂತೆ ನುಗ್ಗಿಬಂದ ಬೃಹತ್ ಬಂಡೆಕಲ್ಲುಗಳು, ಅಗಾಧ ಮಣ್ಣು, ಮರ ಇತ್ಯಾದಿ ಅಪ್ಪಳಿಸಿ ನೆಲಸಮಗೊಳಿಸಿದ ಮುಂಡಕ್ಕೈ, ಚೂರಲ್‌ಮಲ, ಪುಂಜಿರಿವಟ್ಟಂ ಮತ್ತು ವೆಳ್ಳಾರ್‌ಮಲ ಸುತ್ತ ಶುಕ್ರವಾರ ಹುಡುಕಾಟದ್ದೇ ನೋಟ.
ಮುಂಡಕ್ಕೈ ಗುಡ್ಡದ ನೆತ್ತಿಯಿಂದ ನುಗ್ಗಿಬಂದ ಕೆಸರಿನ ಮಹಾಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋದ ಜನರ ಮೃತದೇಹಗಳಿಗಾಗಿ 40 ಕಿಲೊಮೀಟರ್ ದೂರದ ತಗ್ಗು ಪ್ರದೇಶದಲ್ಲಿರುವ ಚಾಲಿಯಾರ್ ಮತ್ತು ಇರುವಂಜಿ ಹೊಳೆಯಲ್ಲೂ ಹುಡುಕಾಟ. ಗುಡ್ಡ ಕುಸಿದ ಭಾಗದಲ್ಲಿ ಹಿಟಾಚಿ, ಜೆಸಿಬಿ ಸದ್ದು, ಥರ್ಮಲ್ ಇಮೇಜ್ ರಡಾರ್‌ಗಳನ್ನು ಹೊತ್ತುಕೊಂಡ ಡ್ರೋನ್ ಹಾರಾಟದ ಗುಂಯ್ ಗುಡುವಿಕೆ.
ಇತ್ತ, ಊಟಿ ರಸ್ತೆಯ ಮೇಪ್ಪಾಡಿ, ಪಂಚಮಿ ಮತ್ತು ಜಿಲ್ಲಾ ಕೇಂದ್ರ ಕಲ್ಪೆಟ್ಟದಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಇರುವವರ ಕಣ್ಣುಗಳಲ್ಲೂ ಹುಡುಕಾಟ. ಕಾಳಜಿ ಕೇಂದ್ರದ ಸಿಬ್ಬಂದಿ ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರೂ ಅವರು ಆಪ್ತರನ್ನು ಕಾಣುವ ಕಾತರದಲ್ಲಿ, ಮನೆಮಂದಿ ಜೊತೆ ಮಾತನಾಡುವ ಬಯಕೆಯಲ್ಲಿ, ತಾಯಿ, ತಂದೆ, ಮಗು, ಪತಿ, ಪತ್ನಿಯನ್ನು ಕಾಣುವ ಆತುರದಲ್ಲಿ ಚಿಂತಿತರಾಗಿದ್ದರು. ಹೀಗಾಗಿ ಯಾರ ತಲೆ ಕಂಡರೂ ಆಸೆಗಣ್ಣಿನಿಂದ ನೋಡುವವರೇ ಅಲ್ಲಿ ಎಲ್ಲರೂ. ಈ ಕಾಯುವಿಕೆ ಎಷ್ಟು ದಿನ, ಅದರ ಫಲವೇನು ಎಂದೇನೂ ಅವರಲ್ಲಿ ಯಾರಿಗೂ ಗೊತ್ತಿಲ್ಲ.
ಭೂಕುಸಿತ ಘಟಿಸಿ ನಾಲ್ಕು ದಿನಗಳಲ್ಲಿ ಇದೇ ಮೊದಲು, ಶುಕ್ರವಾರ ಮಳೆ ಆಗಾಗ ಬಿಡುವು ಪಡೆಯುತ್ತಿತ್ತು. ಗುರುವಾರ ಸಂಜೆವೇಳೆ ತಾತ್ಕಾಲಿಕ ಸೇತುವೆಯೂ ಪೂರ್ಣಗೊಂಡಿದ್ದ ಕಾರಣ ಮುಂಡಕ್ಕೈ, ಪುಂಜಿರಿವಟ್ಟಂ ವರೆಗೆ ಎಲ್ಲ ಯಂತ್ರಗಳಿಗೆ ಹೋಗಲು ಸಾಧ್ಯವಾಗಿತ್ತು. ಹೀಗಾಗಿ ಹುಡುಕಾಟ ಚುರುಕು ಪಡೆದುಕೊಂಡಿತ್ತು. ಒಟ್ಟಾರೆ ಎಂಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆಯಿಂದ ಸಂಜೆಗತ್ತಲವರೆಗೆ ನಡೆದ ಹುಡುಕಾಟ, ಮಾನವ ಪ್ರಯತ್ನದ ದರ್ಶನವೂ ನಿದರ್ಶನವೂ ಆಗಿತ್ತು.
ಭೂಕುಸಿತದ ಸಂದರ್ಭದಲ್ಲಿ ಗಾಬರಿಗೊಂಡು ಕಾಡಿನತ್ತ ಓಡಿದ ಕೆಲವರು ಸೈನಿಕರ ರಕ್ಷಾಕವಚಕ್ಕೆ ಸಿಕ್ಕಿದ್ದಾರೆ. ಮುಂಡಕ್ಕೈ ಪಟ್ಟಣದ ಎರಡು ಮಹಡಿ ಕಟ್ಟಡದಲ್ಲಿ ಯಾವುದೋ ಜೀವವೊಂದರ ತುಡಿತವಿದೆ ಎಂದು ರಾಡಾರ್ ಪತ್ತೆ ಮಾಡಿದ್ದರಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಲ್ಲಿ ಮತ್ತು ಶಿಬಿರಗಳಲ್ಲಿ ಇರುವವರಲ್ಲಿ ಆಶಾಕಿರಣವೂ ಮೂಡಿದೆ. ಆದರೂ ತಮ್ಮವರು ಎಲ್ಲಿ, ಅವರಿಗೆ ಏನಾಗಿದೆ ಎಂಬ ನೋವು ತುಂಬಿದ ಪ್ರಶ್ನೆ ಅವರನ್ನು ಕಾಡುತ್ತಲೇ ಇದೆ.
ಧರ್ಮ, ಸಿದ್ಧಾಂತ ಬದಿಗೆ ಸರಿಸಿದ ಮಾನವೀಯತೆ
ಭೂಕುಸಿತದಿಂದ ನಾಶವಾಗಿರುವ ನಾಲ್ಕು ಗ್ರಾಮಗಳಲ್ಲಿ ಇದ್ದ ದೇವಸ್ಥಾನಗಳಲ್ಲಿ ಯಾವುದೂ ಉಳಿದಿಲ್ಲ. ಆದರೆ ಸ್ವಲ್ಪ ದೂರ ಮಸೀದಿ ಮತ್ತು ಚರ್ಚುಗಳು ಇವೆ. ಹುಡುಕಾಟ ಕಾರ್ಯದಲ್ಲಿ ತೊಡಗಿರುವವರೆಲ್ಲರಿಗೂ ಇಲ್ಲಿ ಊಟ, ತಿಂಡಿ, ವಿಶ್ರಾಂತಿ. ಜಾತಿ, ಧರ್ಮ, ಸಿದ್ಧಾಂತ, ಪಕ್ಷ ಬೇಧ ಮರೆತು ಎಲ್ಲರೂ ಒಂದಾಗಿದ್ದಾರೆ. ಮಸೀದಿ ಮತ್ತು ಚರ್ಚುಗಳ ಆವರಣದಲ್ಲಿ ಆಹಾರ ತಯಾರಿಸಿ ಐದಾರು ಕಿಲೊಮೀಟರ್ ದೂರ, ಬೆಟ್ಟದ ತುತ್ತತುದಿಯಲ್ಲಿ ಕೆಲಸದಲ್ಲಿ ನಿರತರಾಗಿರುವವರಿಗೂ ತಲುಪಿಸಲಾಗುತ್ತಿದೆ.
ಚೂರಲ್‌ಮಲದಲ್ಲಿರುವ ಅನ್ಸಾರ್ ಇಸ್ಲಾಂ ಮಸೀದಿಯಲ್ಲಿ ನಡೆದ ಜುಮ್ಮಾದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಸಾವಿಗೀಡಾದವರಿಗಾಗಿ ‘ಮಯ್ಯತ್ತ್ ನಿಸ್ಕಾರಂ’ ಕೂಡ ನೆರವೇರಿತ್ತು.
‘ಮೊದಲ ಎರಡು ದಿನ ಹುಡುಕಾಟಕ್ಕೆ ತಾಂತ್ರಿಕ ಅಡ್ಡಿಗಳಿದ್ದವು. ಈಗ ಅವೆಲ್ಲ ನೀಗಿವೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಕಣಕ್ಕೆ ಇಳಿದಿದ್ದೇವೆ. ಜೀವಂತವಾಗಿ ಯಾರೂ ಸಿಗುವ ಭರವಸೆ ಇಲ್ಲ. ಮೃತದೇಹಗಳನ್ನಾದರೂ ಮೇಲೆತ್ತಬೇಕು ಎಂಬ ಉದ್ದೇಶದಿಂದ ಎಲ್ಲವನ್ನೂ ಮರೆತು ಕಾರ್ಯಾಚರಣೆ ಮಾಡುತ್ತಿದ್ದೇವೆ’ ಎಂದು ಚೂರಲ್‌ಮಲ ಪ್ರದೇಶದಲ್ಲೇ ಜನಿಸಿ ಬೆಳೆದ ಅಜಯ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕರ್ನಾಟಕದ ಐವರ ಶವ ಪತ್ತೆ
ಶುಕ್ರವಾರದ ಹುಡುಕಾಟದಲ್ಲಿ 12 ಮೃತದೇಹಗಳು ಮತ್ತು ಒಂದು ದೇಹದ ಭಾಗ ಪತ್ತೆಯಾಗಿದೆ. ಈ ಪೈಕಿ ಐದು ಮಂದಿ ಕನ್ನಡಿಗರು. ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕು ಉಕ್ಕಲಗೇರಿ ಗ್ರಾಮದ ಗುರುಮಲ್ಲ (60), ಅಪ್ಪಣ್ಣ (39), ಅಶ್ವಿನಿ (13), ಜೀತು (11) ಮತ್ತು ದಿವ್ಯಾ (35) ಅವರ ಶವ ಪತ್ತೆಯಾಗಿವೆ ಎಂದು ಕರ್ನಾಟಕದ ಮಾಹಿತಿಗಳನ್ನು ಕಲೆ ಹಾಕಿರುವ ಗುಂಡ್ಲುಪೇಟೆ ತಹಶೀಲ್ದಾರ್ ತಿಳಿಸಿದರು. ಮೈಸೂರು ಜಿಲ್ಲೆಯ ಸವಿತಾ ಮತ್ತು ಚಾಮರಾಜನಗರ ಜಿಲ್ಲೆಯ ರತ್ನಮ್ಮ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ದುರಂತದಲ್ಲಿ ಕರ್ನಾಟಕದ ಒಟ್ಟು 18 ಮಂದಿ ನಾಪತ್ತೆಯಾಗಿದ್ದು ಮಂಗಳವಾರದಿಂದ ಇಲ್ಲಿಯವರೆಗೆ 16 ಮಂದಿಯ ಮೃತದೇಹಗಳು ಸಿಕ್ಕಿವೆ. ಶುಕ್ರವಾರ ಕನ್ನಡಿಗರ ಐದೂ ದೇಹಗಳು ಚೂರಲ್‌ಮಲ ಸಮೀಪದ
ವೆಳ್ಳಾರ್‌ಮಲದಲ್ಲಿ ಲಭಿಸಿದ್ದವು.
‘ನೆನಪುಗಳು ಮಣ್ಣಾಗಿ ಹೋಗಲಿ’
ಮಗುವಿನೊಂದಿಗೆ ಹೇಗೋ ಜೀವ ಉಳಿಸಿಕೊಂಡೆ. ಅಕ್ಕಪಕ್ಕದ ಮನೆಯವರು ಕಣ್ಣಮುಂದೆ ಕೆಸರಿನಲ್ಲಿ ಹೂತುಹೋಗುವುದನ್ನು ನೋಡಿದೆ. ಸಾಹಸದಿಂದ ನಾವೆಲ್ಲರೂ ಜೀವ ಉಳಿಸಿಕೊಂಡೆವು. ಇನ್ನು ಯಾವ ಕಾರಣಕ್ಕೂ ಅತ್ತ ಸುಳಿಯುವುದಿಲ್ಲ. ಅಲ್ಲಿನ ನೆನಪುಗಳು ಕುಸಿದ ಮಣ್ಣಿನೊಂದಿಗೆ ಮಣ್ಣಾಗಿ ಹೋಗಲಿ...
ಹೆಗಲಲ್ಲಿ ನಿದ್ರೆಯಲ್ಲಿದ್ದ ಹಸುಕೂಸಿನ ಬೆನ್ನಿಗೆ ಮೆತ್ತಗೆ ಬಡಿಯುತ್ತ ಹೇಳಿದರು ರಮೀನ.
ಮುಂಡಕ್ಕೈಯ ಪಾಡಿಯಿಂದ ಹೆರಿಗೆಗಾಗಿ ಚೂರಲ್‌ಮಲಕ್ಕೆ ಬಂದಿದ್ದ ರಮೀನ ಅವರ ಹೆರಿಗೆ ಮೂರು ತಿಂಗಳ ಹಿಂದೆ ಆಗಿತ್ತು. ಒಬ್ಬ ಮಗ ಇದ್ದಾನೆ. ತಂದೆ ಕಳೆದ ವರ್ಷ ನಿರ್ಮಿಸಿದ ಸಣ್ಣ ಮನೆಯಲ್ಲಿ ವಾಸ. ದುರಂತ ನಡೆದ ದಿನ ತಂದೆ ಇಸ್ಮಾಯಿಲ್, ತಾಯಿ ಹೈರುನ್ನಿಸ, ಪತಿ ಶಂಸೀರ್ ಮತ್ತು ಮಗ ಶಿರಾಸ್ ಇದ್ದರು.
‘ಮಧ್ಯರಾತ್ರಿ ದೊಡ್ಡ ಸದ್ದು ಕೇಳಿ ಎದ್ದ ಉಪ್ಪ (ತಂದೆ) ಅಡುಗೆಮನೆಯ ಕಿಟಕಿಯಿಂದ ನೋಡಿದಾಗ ಭಾರಿ ಪ್ರಮಾಣದ ಕೆಸರು ನುಗ್ಗಿ ಬರುವುದು ಕಾಣಿಸಿತು. ಎಲ್ಲರನ್ನೂ ಎಬ್ಬಿಸಿ ತಾರಸಿ ಮೇಲೆ ಕರೆದುಕೊಂಡು ಹೋದರು. ಸ್ವಲ್ಪ ಹೊತ್ತಿನಲ್ಲಿ ಮುಂಡಕ್ಕೈಯಿಂದ ಸಂಬಂಧಿಕರ ಕರೆ ಬಂತು. ಭೂಮಿ ಕುಸಿದಿದೆ, ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದರು’ ಎಂದು ರಮೀನಾ ಹೇಳಿ ನಡುಗಿದರು.
‘ಇನ್ನು ಮನೆಯೊಳಗೆ ಇರುವುದು ಸುರಕ್ಷಿತವಲ್ಲ ಎಂದುಕೊಂಡು ಹೊರಗೆ ಓಡಿದೆವು. ಅಷ್ಟರಲ್ಲಿ ಕೆಸರು, ಮರ, ಬಂಡೆ ಎಲ್ಲವೂ ನುಗ್ಗಿಬರುತ್ತಿತ್ತು. ಏನೆಂದೇ ತೋಚುತ್ತಿರಲಿಲ್ಲ. ಸುತ್ತಲೂ ಕತ್ತಲು, ನೀರಿನ ಭಾರಿ ಸೆಳೆತ. ಅದ್ಹೇಗೋ ಸಮೀಪದ ಮನೆಯ ಒಳಗೆ ಸೇರಿದೆವು. ಅದೃಷ್ಟವಶಾತ್ ಆ ಮನೆಗೆ ಏನೂ ಆಗಲಿಲ್ಲ. ಮರುದಿನ ಸೈನಿಕರು ಇಲ್ಲಿಗೆ ಕರೆದುಕೊಂಡು ಬಂದರು. ಅಂದು ರಾತ್ರಿ ಕಂಡ ಭಯಾನಕ ನೋಟ ಇನ್ನೂ ಮಾಸಿಲ್ಲ. ಸಂಬಂಧಿಕರು, ಪರಿಚಿತರು ಸೇರಿದಂತೆ 24 ಮಂದಿಯ ಶವ ಎತ್ತುವುದನ್ನು ಕಣ್ಣಾರೆ ನೋಡಿದೆವು. ಎಲ್ಲಾದರೂ ಒಂದು ಸಣ್ಣ ಮನೆ ನಿರ್ಮಿಸಲು ಅವಕಾಶ ಸಿಕ್ಕಿದರೆ ಸಾಕು, ಆದರೆ ಚೂರಲ್‌ಮಲ ಕಡೆಗೆ ಹೋಗಲು ಸಾಧ್ಯವಿಲ್ಲ’ ಎಂದು ರಮೀನಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.