ADVERTISEMENT

Wayanad Landslide | ಮನಮಿಡಿದ ನಾಡಿನಲ್ಲಿ ಸೌಹಾರ್ದದ ‘ಸಂಸ್ಕಾರ’

ಮೃತರ ಸಂಬಂಧಿಕರಿಗೆ ಗುಡಿ–ಚರ್ಚು–ಮಸೀದಿಗಳಲ್ಲಿ ಆಶ್ರಯ, ಅಂತ್ಯಕ್ರಿಯೆಗೆ ಪರಸ್ಪರ ನೆರವು

ವಿಕ್ರಂ ಕಾಂತಿಕೆರೆ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
ಅನಾಥ ಪ್ರಾಣಿಗಳಿಗೆ ಪಶುಸಂಗೋಪನೆ ಇಲಾಖೆಯಿಂದ ಆರೈಕೆ
ಅನಾಥ ಪ್ರಾಣಿಗಳಿಗೆ ಪಶುಸಂಗೋಪನೆ ಇಲಾಖೆಯಿಂದ ಆರೈಕೆ   

ಮೇಪ್ಪಾಡಿ‌ (ವಯನಾಡ್ ಜಿಲ್ಲೆ): ನಾಲ್ಕು ಗ್ರಾಮಗಳನ್ನು ಸರ್ವನಾಶ ಮಾಡಿದ ಗುಡ್ಡ ಕುಸಿತ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಅಂತ್ಯಸಂಸ್ಕಾರ, ದುರಿತ–ದುಃಖದ ನಡುವೆ ಧಾರ್ಮಿಕ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.

ಮುನ್ನೂರಕ್ಕೂ ಅಧಿಕ ಮಂದಿಯ ಜೀವವನ್ನೂ ಅದಕ್ಕಿಂತಲೂ ಹೆಚ್ಚು ಮಂದಿಯ ಜೀವನವನ್ನೂ ಕಸಿದ ದುರಂತದಲ್ಲಿ ಮಡಿದವರ ಅಂತ್ಯಸಂಸ್ಕಾರ ಮೇಪ್ಪಾಡಿ ಪಟ್ಟಣದ ಆರುನೂರು ಮೀಟರ್ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ನಡೆಯುತ್ತಿದೆ. ರುದ್ರಭೂಮಿ, ಕಬರಸ್ತಾನ ಮತ್ತು ಚರ್ಚ್‌ನ ಸ್ಮಶಾನದಲ್ಲಿ ಆಯಾ ಸಮುದಾಯದವರ ಸಂಸ್ಕಾರ ನಡೆಯುತ್ತಿದ್ದರೂ ಉಳಿದುಕೊಳ್ಳುವ ಜಾಗ, ಅನ್ನ–ಆಹಾರ, ನೆರವು ಇತ್ಯಾದಿಗಳಿಗೆ ಧರ್ಮದ ಗಡಿ ಇಲ್ಲ.

ಹಿಂದೂ ಪದ್ಧತಿಯಂತೆ ಸಂಸ್ಕಾರ ಮಾಡಲು ಮೇಪ್ಪಾಡಿ ಪಟ್ಟಣದಲ್ಲಿರುವ ಮಾರಿಯಮ್ಮ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಸಜ್ಜುಗೊಳಿಸಲಾಗಿದೆ. ಈ ಸ್ಮಶಾನ ದುರಂತದಲ್ಲಿ ಮಡಿದವರಿಗಾಗಿಯೇ ದಿಢೀರ್ ಸಜ್ಜುಗೊಂಡಿದೆ. ಇದರ ಸಮೀಪದಲ್ಲೇ ಇದೆ, ಸಿಎಸ್ಐ ಹೋಲಿ ಇಮ್ಯಾನುಯೆಲ್ ಚರ್ಚ್. ಅಲ್ಲಿ ಕ್ರೈಸ್ತರ ಸಿಎಸ್‌ಐ ಪಂಗಡದವರ ಸಂಸ್ಕಾರ ಮಾಡಲಾಗುತ್ತದೆ. ಕ್ಯಾಥೊಲಿಕ್ ಮತ್ತು ಆರ್ಥೊಡಾಕ್ಸ್ ಪದ್ಧತಿಯವರ ಸಂಸ್ಕಾರ ಚೂರಲ್‌ಮಲ ಚರ್ಚ್‌ ಪ್ರದೇಶದಲ್ಲಿ ಮಾಡಲಾಗುತ್ತಿದೆ.

ADVERTISEMENT

ಮಾರಿಯಮ್ಮ ದೇವಸ್ಥಾನದ ಒಂದು ಎಕರೆಯಷ್ಟು ಜಾಗವನ್ನು ಸಂಸ್ಕಾರಕ್ಕಾಗಿ ಬಿಟ್ಟುಕೊಡಲಾಗಿದೆ. ಇಲ್ಲಿ ಕೆಲಸ ಮಾಡುವವರಿಗೂ ಮೃತರ ಸಂಬಂಧಿಕರಿಗೂ ವಿಶ್ರಾಂತಿ ಮತ್ತು ರಾತ್ರಿ ತಂಗಲು ಇಮ್ಯಾನುಯೆಲ್ ಚರ್ಚ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇಲ್ಲಿಂದ ಅರ್ಧ ಕಿಲೊಮೀಟರ್ ದೂರದಲ್ಲಿ ಮೇಪ್ಪಾಡಿ ಮಾಲ್ಲ್‌ ಮುಸ್ಲಿಂ ಜಮಾತ್ ಮಸೀದಿ ಇದೆ. ಸುತ್ತ ಸಣ್ಣಪುಟ್ಟ 10 ಮಸೀದಿಗಳಿವೆ. ಅಲ್ಲೆಲ್ಲ ಇಸ್ಲಾಂ ಧರ್ಮದವರ ಸಂಸ್ಕಾರ ಆಗುತ್ತದೆ. ಅದರೆ ಸಮೀಪದ ಕಾಳಜಿ ಕೇಂದ್ರದಲ್ಲಿರುವವರನ್ನು ಭೇಟಿಯಾಗಲು ಬರುವವರೆಲ್ಲರೂ ಮಸೀದಿಯ ಆವರಣದಲ್ಲಿ ತಂಗುತ್ತಾರೆ. ಅವರಿಗೆ ಚಿಕನ್ ಬಿರಿಯಾನಿ, ನೀರು, ಬಿಸ್ಕತ್‌, ತಂಪುಪಾನೀಯಗಳು ಇತ್ಯಾದಿ ವಿತರಣೆ ಆಗುತ್ತದೆ. 

ಇತರ ಧರ್ಮದವರಿಗೂ ಅವಕಾಶ

ಮಾರಿಯಮ್ಮ ದೇವಸ್ಥಾನದ ಜಾಗದಲ್ಲಿ ದೇವಸ್ಥಾನ ಟ್ರಸ್ಟ್ ಸಮಿತಿ ಮತ್ತು ಸೇವಾಭಾರತಿ ಕಾರ್ಯಕರ್ತರು ಗ್ಯಾಸ್, ಕಟ್ಟಿಗೆ ಇತ್ಯಾದಿಗಳನ್ನು ಬಳಸಿ ಸಂಸ್ಕಾರ ಮಾಡುತ್ತಾರೆ. ಒಂದೇ ಹೊತ್ತು 15 ದೇಹಗಳನ್ನು ದಹಿಸುವ ಸೌಲಭ್ಯ ಇಲ್ಲಿದೆ.

‘ಇತರ ಧರ್ಮದವರಿಗೆ ಅವರ ಪದ್ಧತಿಯಂತೆ ಸಂಸ್ಕಾರ ಮಾಡಲು ಅವಕಾಶ ನೀಡಲಾಗುವುದು. ಗುರುತು ಪತ್ತೆಯಾಗದ ದೇಹಗಳನ್ನು ಸದ್ಯ ಶವಾಗಾರದ ಸಮೀಪದಲ್ಲೇ ಮಣ್ಣಿನಲ್ಲಿ ಹೂತಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆ ದೇಹಗಳನ್ನು ಶಾಶ್ವತವಾಗಿ ಹುಗಿದಿಡುವುದಾದರೆ ಇಲ್ಲಿ ಅವಕಾಶ ನೀಡಲಾಗುವುದು’ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಬಬಿತಾ ಗೋಪಿನಾಥ್ ತಿಳಿಸಿದರು.   

‘ನೆರವು ನೀಡುವಂತೆ ಮಲಬಾರ್ ದೇವಸ್ವಂ ಮಂಡಳಿ ಸೂಚಿಸಿತ್ತು. ಖಾಲಿ ಜಾಗ ಇದ್ದುದರಿಂದ ಅದನ್ನು ಸಂಸ್ಕಾರಕ್ಕೆ ಮೀಸಲಿಡಲು ಮುಂದಾದೆವು. ಶವಾಗಾರ ಹತ್ತಿರದಲ್ಲೇ ಇರುವುದರಿಂದ ಅನುಕೂಲ ಆಗುತ್ತಿದೆ’ ಎಂದು ಅವರು ಹೇಳಿದರು.  

ಭೂಕುಸಿತದಿಂದ ಮಡಿದ ಜಿಷಾ ಅವರ ಕೈಯ ಗುರುತು ಹಿಡಿದು ಅದರ ಅಂತ್ಯಸಂಸ್ಕಾರವನ್ನು ಕುಟುಂಬದ ಸದಸ್ಯರು ನಡೆಸಿದರು
 

ಗುರುತು ನೀಡಿದ ಉಂಗುರ; ಕೈಗೆ ಸಂಸ್ಕಾರ

ದುರಂತದಲ್ಲಿ ಸಾವಿಗೀಡಾದ ಮಹಿಳೆಯ ಕೈಯನ್ನು ಶನಿವಾರ ಸಂಸ್ಕರಿಸಲಾಯಿತು. ಚೂರಲ್‌ಮಲ ಸರ್ಕಾರಿ ಶಾಲೆಯ ಸಮೀಪದ ಮನೆಯಲ್ಲಿ ವಾಸವಾಗಿದ್ದ ಜಿಶಾ (45) ಅವರ ಕೈ ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿ ಲಭಿಸಿತ್ತು. ಉಂಗುರವನ್ನು ಗಮನಿಸಿದ ಸಂಬಂಧಿಕರು ಮೃತದೇಹದ ಗುರುತು ಪತ್ತೆ ಮಾಡಿದ್ದರು. ಶನಿವಾರ ಸಂಜೆಗತ್ತಲಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಜಿಶಾ, ಅವರ ಪತಿ ಮುರುಗನ್‌, ಮಗ ಅಕ್ಷಯ್‌, ಮುರುಗನ್‌ ಅವರ ಸಹೋದರ ರಾಜನ್‌, ರಾಜನ್ ಪತ್ನಿ ವಿನೀತಾ ಮತ್ತು ತಾಯಿ ತಂಗಮ್ಮ ಕೆಸರುನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ನಾಲ್ಕೂವರೆ ವರ್ಷದ ಅಕ್ಷಯ್ ಮೃತದೇಹ ಮೊದಲ ದಿನವೇ ಚೂರಲ್ ಮಲದಲ್ಲಿ ಪತ್ತೆಯಾಗಿತ್ತು. ಇತರರ ಬಗ್ಗೆ ಮಾಹಿತಿ ಇಲ್ಲ ಎಂದು ಸಂಬಂಧಿಕ ಜೋಜೊ ‘ಪ್ರಜಾವಾಣಿ’ಗೆ ತಿಳಿಸಿದರು.‌

ಅನಾಥ ಪ್ರಾಣಿಗಳಿಗೆ ಪಶುಸಂಗೋಪನೆ ಇಲಾಖೆಯಿಂದ ಆರೈಕೆ

ಸಾಕುಪ್ರಾಣಿಗಳಿನ್ನು ಅನಾಥವಲ್ಲ

ದುರಂತದ ಸಂದರ್ಭದಲ್ಲಿ ಜೀವ ಉಳಿಸಿಕೊಂಡ ಸಾಕುಪ್ರಾಣಿಗಳು ಅನಾಥವಾಗದಂತೆ ನೋಡಿಕೊಳ್ಳಲು ಕೇರಳ ಪಶುಸಂಗೋಪನೆ ಇಲಾಖೆ ಮುಂದಾಗಿದೆ. ಮನೆಮಂದಿಯನ್ನು ಹುಡುಕಾಡುತ್ತಿರುವ ಮತ್ತು ಅಸ್ವಸ್ಥವಾಗಿರುವ ಪ್ರಾಣಿಗಳ ದತ್ತುಯೋಜನೆ ಆರಂಭಿಸಲಾಗಿದ್ದು ಇದಕ್ಕಾಗಿ 24 ತಾಸು ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂ ತೆರೆಯಲಾಗಿದೆ. ಗಾಯಗೊಂಡ ಪ್ರಾಣಿಗಳನ್ನು ಇಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೀವಂತ ಅಥವಾ ಸತ್ತ ಪ್ರಾಣಿ ಪಕ್ಷಿಗಳು ಸಿಕ್ಕಿದರೆ ಕಂಟ್ರೋಲ್ ರೂಂಗೆ ಒಪ್ಪಿಸುವಂತೆ ತಿಳಿಸಲಾಗಿದೆ.

ದುರ್ಗಮ ಹಾದಿ: ದಾರಿ ತೋರಲು ಶ್ವಾನಗಳು

ಬೆಟ್ಟ–ಗುಡ್ಡ ಕಾನನದ ದುರ್ಗಮ ಹಾದಿಗಳಲ್ಲಿ ಶನಿವಾರ ಹುಡುಕಾಟ ಆರಂಭವಾಗಿದ್ದು ಇದಕ್ಕೆ ಸೇನೆ ಪೊಲೀಸ್ ಮತ್ತು ತಮಿಳುನಾಡು ಅಗ್ನಿಶಾಮಕ ದಳದ 11 ಶ್ವಾನಗಳನ್ನು ಬಳಸಲಾಗಿದೆ. ಯಂತ್ರಗಳನ್ನು ಸಾಗಿಸಲು ಸಾಧ್ಯವಾಗದಲ್ಲಿ ಶ್ವಾನಗಳ ಜೊತೆ ಸಿಬ್ಬಂದಿ ತೆರಳುತ್ತಿದ್ದಾರೆ. ಪ್ರತಿಕೂಲ ಹವಾಮಾನದಲ್ಲೂ ದುರ್ಗಮ ಹಾದಿಯಲ್ಲೂ ಸಾಗಲು ವಿಶೇಷ ತರಬೇತಿ ಪಡೆದ ಶ್ವಾನಗಳು ಇವು.  ವಯನಾಡ್ ಶ್ವಾನದಳದ ಮ್ಯಾಗಿ ಕೊಚ್ಚಿ ನಗರ ಪೊಲೀಸ್ ಶ್ವಾನದಳದ ಮಾಯ ಮರ್ಫಿ ನಿಲಂಬೂರಿನ ಇಡುಕ್ಕಿ ಶ್ವಾನದಳದ ಏಂಜಲ್‌ ಮುಂತಾದವು ಕೂಡ ಇದರಲ್ಲಿವೆ. ಮೃತದೇಹಗಳು ಇರುವುದು ಗೊತ್ತಾದರೆ ಕೆಲವು ಶ್ವಾನಗಳು ಬೊಗಳುತ್ತವೆ. ಕೆಲವು ನೆಲವನ್ನು ಬಗೆಯುತ್ತವೆ. ಇನ್ನು ಕೆಲವು ಬಾಲ ಆಡಿಸುತ್ತವೆ.

ವಯನಾಡ್‌ ಜಿಲ್ಲೆಯಲ್ಲಿ ಭೂಕುಸಿತ ನಡೆದ ಸ್ಥಳದಲ್ಲಿ ರಕ್ಷಣಾ ತಂಡದ ಸದಸ್ಯರು ಶನಿವಾರ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಿದರು

ಶಾಲೆಯ ಪುನರ್ನಿರ್ಮಾಣದ ಭರವಸೆ

ಮುಂಡಕ್ಕೈಯಲ್ಲಿ ನೆಲಸಮಗೊಂಡಿರುವ ಸರ್ಕಾರಿ ಶಾಲೆಯ ಕಟ್ಟಡ ಪುನರ್ನಿರ್ಮಾಣದ ಭರವಸೆ ಮೂಡಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಲೆಫ್ಟಿನೆಂಟ್ ಕರ್ನಲ್ ಚಿತ್ರನಟ ಮೋಹನ್‌ಲಾಲ್ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ವಿಶ್ವಶಾಂತಿ ಫೌಂಡೇಶನ್ ವತಿಯಿಂದ ಶಾಲೆ ಕಟ್ಟಡ ಪುನರ್ನಿರ್ಮಿಸಲು ₹ 3 ಕೋಟಿ ನೀಡುವುದಾಗಿ ಘೋಷಿಸಿದರು. ಮುಂಡಕ್ಕೈಯಲ್ಲಿರುವ ‘ವನರಾಣಿ’ ಕಾಫಿ ಎಸ್ಟೇಟ್ ಆರು ವರ್ಷಗಳ ಹಿಂದೆ ಮೋಹನ್‌ಲಾಲ್ ಅವರ ಮಾಲೀಕತ್ವದಲ್ಲಿತ್ತು. ದುರಂತ ಭೂಮಿಯ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 122 ಇನ್ಫೆಂಟ್ರಿ ಬೆಟಾಲಿಯನ್‌ನ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ ಮೋಹನ್‌ಲಾಲ್‌.

ಭೂಕುಸಿತ ಪ್ರದೇಶಗಳಿಗೆ ನಟ ಮೋಹನ್‌ಲಾಲ್‌ ಭೇಟಿ ನೀಡಿದರು.  

ದರಂತ ಮತ್ತು ಹಬ್ಬಗಳಲ್ಲಿ ಕೇರಳದ ಜನರಿಗೆ ಜಾತಿ–ಧರ್ಮವಿಲ್ಲ. ನೋವಿನ ಸಂದರ್ಭದಲ್ಲಿ ಜೊತೆಗೂಡಿ ನೆರವಾಗುವುದು ಕೇರಳದ ಸಂಸ್ಕೃತಿಯ ಭಾಗ.
–ಬಬಿತಾ ಗೋಪಿನಾಥ್ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷೆ
ದುರಂತಗಳು ಸಂಭವಿಸಿದಾಗ ಧರ್ಮದ ವಿಷಯ ಮಧ್ಯಪ್ರವೇಶಿಸುವುದಿಲ್ಲ. ಮಸೀದಿ ಮಾಡುತ್ತಿರುವ ಸೇವೆಗೆ ಬೇರೆ ಧರ್ಮದವರೂ ಕೈಜೋಡಿಸಿದ್ದಾರೆ.‌
–ಅಲಿ ಮಾಸ್ಟರ್ ಮುಸ್ಲಿಂ ಜಮಾತ್ ಮಸೀದಿ ಕಾರ್ಯದರ್ಶಿ
ಚರ್ಚ್‌ನ ಸಭಾಂಗಣದಲ್ಲೂ ಕೊಠಡಿಗಳಲ್ಲೂ ಎಲ್ಲರಿಗೆ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಈಗ ಇಲ್ಲಿ ಧರ್ಮದ ಗಡಿ ಇಲ್ಲ. ಎಲ್ಲರೂ ಮನುಷ್ಯರು.
–ಸುನಿತಾ ಜೇಮ್ಸ್ ಇಮ್ಯಾನುಯೆಲ್ ಚರ್ಚ್ ಖಜಾಂಚಿ
ಅನೇಕ ಕಡೆಗಳಲ್ಲಿ ಶವಸಂಸ್ಕಾರಕ್ಕೆ ನೆರವಾಗಿದ್ದೇನೆ. ಇಂಥ ದಯನೀಯ ಸ್ಥಿತಿ ಎಲ್ಲೂ ಎದುರಾಗಲಿಲ್ಲ. ಪ್ರತಿ ಸಂಸ್ಕಾರದಲ್ಲೂ ಬಿಕ್ಕುತ್ತಿದ್ದೇನೆ.
–ರಾಧಾಕೃಷ್ಣನ್ ಸೇವಾ ಭಾರತಿ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.