ವಯನಾಡು: ಭೂಕುಸಿತ ಸಂಭವಿಸಿರುವ ಕೇರಳದ ವಯನಾಡು ಜಿಲ್ಲೆಯಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಈ ಪ್ರದೇಶದ ಪದವೆಟ್ಟಿ ಕುನ್ನು ಬಳಿ ಸಿಲುಕಿಕೊಂಡು ರಕ್ಷಣೆಗಾಗಿ ಕಾಯುತ್ತಿದ್ದ ನಾಲ್ವರನ್ನು ಭಾರತೀಯ ಸೇನೆ ರಕ್ಷಿಸಿದೆ. ಈ ಪೈಕಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ.
ಭೂಕುಸಿತದಿಂದ ಮನೆಗೆ ಸಂಪರ್ಕ ಕಡಿತಗೊಂಡಿದ್ದರಿಂದ ಒಂದೇ ಕುಟುಂಬದ ನಾಲ್ವರು ಜೀವ ಕೈಯಲ್ಲಿ ಹಿಡಿದುಕೊಂಡು ರಕ್ಷಣೆಗಾಗಿ ಕಾಯುತ್ತಿದ್ದಾರೆ. ಕುಟುಂಬವನ್ನು ವಾಯುಮಾರ್ಗದ ಮೂಲಕ ಕರೆತರಲಾಗುವುದು ಎಂದು ರಕ್ಷಣಾ ಇಲಾಖೆಯ ಪಿಆರ್‌ಒ ತಿಳಿಸಿದ್ದಾರೆ.
ಮನೆಯಲ್ಲಿ ಸಿಲುಕಿದ್ದವರ ಬಗ್ಗೆ ಅವರ ಸಂಬಂಧಿಕರು ಮಾಹಿತಿ ನೀಡಿದ ಬಳಿಕ ರಕ್ಷಣಾ ಕಾರ್ಯಾಚರಣೆಯ ತಂಡ ಅಲ್ಲಿಗೆ ತಲುಪಿತ್ತು ಎಂದು ಮೂಲಗಳು ತಿಳಿಸಿವೆ.
ಭೂಕುಸಿತದಲ್ಲಿ ಅವರ ಮನೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ನಾಲ್ವರಿಗೂ ಯಾವುದೇ ತೊಂದರೆ ಆಗದಂತೆ ಅತ್ಯಂತ ಕಾಳಜಿ ವಹಿಸಿ ಕಾರ್ಯಾಚರಣೆ ನಡೆಸಲಾಗಿದೆ. ತುರ್ತು ಸ್ಥಳಾಂತರಕ್ಕಾಗಿ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ.
ದುರದೃಷ್ಟವಶಾತ್, ರಕ್ಷಿಸಲಾದ ಒಬ್ಬ ಮಹಿಳೆಗೆ ಕಾಲಿನ ಸಮಸ್ಯೆ ಎದುರಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಡಕ್ಕೈನಲ್ಲಿ ಮಳೆ ನಡುವೆಯೇ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈಗಲೂ ಸುಮಾರು 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಹೇಳಿದ್ದಾರೆ.
ಈಗಾಗಲೇ ಮೃತರ ಸಂಖ್ಯೆ 300ರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಕುಮಾರ್, ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿ, ಸುಮಾರು 300 ಮಂದಿ ಇನ್ನೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ. ಇನ್ನು ಎರಡು ಮೂರು ದಿನಗಳಲ್ಲಿ ಕಂದಾಯ ಇಲಾಖೆ ಈ ಕುರಿತು ಖಚಿತ ಸಂಖ್ಯೆಯನ್ನು ತಿಳಿಸಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.