ADVERTISEMENT

Wayanad Landslide | ರಾಜ್ಯದಿಂದ ರಕ್ಷಣಾ ತಂಡ, ಕಟ್ಟೆಚ್ಚರಕ್ಕೆ ಸಿಎಂ ತಾಕೀತು

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 23:51 IST
Last Updated 30 ಜುಲೈ 2024, 23:51 IST
<div class="paragraphs"><p>ವಯನಾಡಿನಲ್ಲಿ ಭೂಕುಸಿತ</p></div>

ವಯನಾಡಿನಲ್ಲಿ ಭೂಕುಸಿತ

   

(ಪಿಟಿಐ ಚಿತ್ರ)

ನವದೆಹಲಿ: ಬೆಂಗಳೂರಿನಲ್ಲಿರುವ ಎನ್‌ಡಿಆರ್‌ಎಫ್‌ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್‌ (ಎಂಇಜಿ) ಸೇನಾ ಪಡೆಯ ತಂಡ ವಯನಾಡ್‌ಗೆ ಪರಿಹಾರ ಕಾರ್ಯಾಚರಣೆಗಾಗಿ ತ್ವರಿತವಾಗಿ ತೆರಳಲು, ಅಗತ್ಯ ಉಪಕರಣಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನೆ ಮಾಡಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. 

ADVERTISEMENT

ಎಂಇಜಿಯ ಒಬ್ಬರು ಅಧಿಕಾರಿ, ಇಬ್ಬರು ಜೆಸಿಓಗಳು ಹಾಗೂ ವಿವಿಧ ದರ್ಜೆಯ 70 ಸಿಬ್ಬಂದಿ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ 15 ವಾಹನಗಳಲ್ಲಿ ವಯನಾಡ್‌ಗೆ ತೆರಳಿದ್ದಾರೆ. ಇನ್ನೂ ಇಬ್ಬರು ಅಧಿಕಾರಿಗಳು, ನಾಲ್ವರು ಜೆಸಿಒಗಳು, ಹಾಗೂ 100 ಸೇನಾ ಸಿಬ್ಬಂದಿ ರಕ್ಷಣಾ ಉಪಕರಣ
ಗಳೊಂದಿಗೆ 40 ವಾಹನಗಳಲ್ಲಿ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ತಂಡಗಳು ವಯನಾಡ್‌ಗೆ ಶೀಘ್ರವೇ ತಲುಪಲು ಅನುವಾಗುವಂತೆ, ಬಂಡಿಪುರ ಚೆಕ್‌ಪೋಸ್ಟ್‌ನಲ್ಲಿ ಗ್ರೀನ್‌ ಕಾರಿಡಾರ್‌ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ಒದಗಿಸಲಾಗು
ತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡಿಗರ ರಕ್ಷಣೆಗೆ ಪ್ರಯತ್ನ:

ವಯನಾಡಿನಲ್ಲಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಅವರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುಂಡ್ಲುಪೇಟೆ–ಕೇರಳ ಹೆದ್ದಾರಿ ಬಂದ್‌:

ಗುಂಡ್ಲುಪೇಟೆ–ಕೇರಳ ನಡುವಿನ ರಾಷ್ಟ್ರೀಯ ಹೆದ್ದಾರಿ 766ರ ಮುತ್ತುಂಗ ಬಳಿ ನೀರು ತುಂಬಿಕೊಂಡ ಕಾರಣ ಕೇರಳಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕಟ್ಟೆಚ್ಚರಕ್ಕೆ ಸಿ.ಎಂ ಸಿದ್ದರಾಮಯ್ಯ ತಾಕೀತು

ರಾಜ್ಯದಲ್ಲಿಡೆ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ ಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗುತ್ತಿದ್ದು ಈ ಕುರಿತು ಜಿಲ್ಲಾಧಿಕಾರಿಗಳು ಎಚ್ಚರ ವಹಿಸುವಂತೆ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪರಿಸ್ಥಿತಿಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.

ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕು. ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳನ್ನು ಕೈಗೊಳ್ಳಬೇಕು ಹಾಗೂ ಪ್ರವಾಹ ಪೀಡಿತರಿಗೆ ಅಗತ್ಯಕ್ಕನುಸಾರವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ತಿಳಿಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿ ತೆರೆದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

ವಯನಾಡ್‌ಗೆ ಮೈಸೂರು ತಂಡ

ಮೈಸೂರು: ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಜಿಲ್ಲೆಯವರೂ ಸೇರಿದಂತೆ ರಾಜ್ಯದ ಯಾರಾದರೂ ಇದ್ದರೆ, ಅವರನ್ನು ರಕ್ಷಿಸಲು ಜಿಲ್ಲಾಡಳಿತವು ಇಬ್ಬರು ಅಧಿಕಾರಿಗಳ ತಂಡವನ್ನು ಕೇರಳಕ್ಕೆ ಮಂಗಳವಾರ ಕಳುಹಿಸಿಕೊಟ್ಟಿದೆ.

‘ಭೂಕುಸಿತದಲ್ಲಿ ಸಿಲುಕಿದವರ ಮಾಹಿತಿ ನೀಡಲು ಜಿಲ್ಲಾಡಳಿತ ಕಂಟ್ರೋಲ್‌ ರೂಂ ತೆರೆದಿದೆ. ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ತಂಡವನ್ನು ಕಳುಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕಕ್ಕೂ ಎಚ್ಚರಿಕೆ ಗಂಟೆ: ಈಶ್ವರ ಖಂಡ್ರೆ

ಬೆಂಗಳೂರು: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತದ ದುರಂತ ಆಘಾತಕಾರಿಯಾಗಿದ್ದು, ಇದು ಕರ್ನಾಟಕಕ್ಕೂ ಎಚ್ಚರಿಕೆ ಗಂಟೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಉತ್ತರ ಕನ್ನಡದ ಶಿರೂರು ಮತ್ತು ಕೇರಳದ ವಯನಾಡ್‌ನಲ್ಲಿ ನಡೆದಿರುವ ಈ ಭೀಕರ ದುರ್ಘಟನೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಹಲವು ಗಿರಿ
ಪ್ರದೇಶಗಳಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ವಸತಿ ಪ್ರದೇಶ, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟುನಿಟ್ಟಿನ ಹಾಗೂ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಬ್ಬರು ನಾಪತ್ತೆ: ಮೂವರ ಸ್ಥಿತಿ ಗಂಭೀರ

ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ಜಗದೀಶ್–ಕುಳ್ಳಮ್ಮ ದಂಪತಿ ಪುತ್ರಿ ಝಾನ್ಸಿರಾಣಿ ಕುಟುಂಬವು, ಕೇರಳದ ವಯನಾಡ್‌ ನಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದೆ.
ಕೇರಳದ ವಯನಾಡ್‌ನ ಮುಂಡಕ್ಕೈ ಗ್ರಾಮದಲ್ಲಿ ಕುಟುಂಬ ವಾಸವಿತ್ತು. ಝಾನ್ಸಿರಾಣಿ– ಅನಿಲ್ ಕುಮಾರ್ ದಂಪತಿ, ಹಾಗೂ ಝಾನ್ಸಿರಾಣಿ ಮಾವ ದೇವರಾಜು ಸಾವು– ಬದುಕಿನ ನಡುವೆ ಹೋರಾಟ ನಡೆಸುತಿದ್ದಾರೆ. ಅತ್ತೆ ಲೀಲಾವತಿ (55), ಪುತ್ರ ನಿಹಾಲ್ (26) ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

‘ಘಟನೆ ಕೇಳಿ ಗಾಬರಿ ಗೊಂಡಿದ್ದೇವೆ. ಒಳ್ಳೆಯ ಸುದ್ದಿಗಾಗಿ ಆತಂಕದಿಂದಲೇ ಕಾಯುತ್ತಿದ್ದೇವೆ’ ಎಂದು ಕುಟುಂಬದ ಸದಸ್ಯ ಮಂಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.