ಕಲ್ಪೆಟ್ಟ (ವಯನಾಡ್ ಜಿಲ್ಲೆ): ಮುಂಭಾಗದ ಮೆಟ್ಟಿಲು ಇಳಿದು ಮೈದಾನದಲ್ಲಿ ನಿಂತು ನೋಡಿದರೆ ತಣ್ಣನೆ ಹರಿಯುವ ಹೊಳೆ. ಅದರಾಚೆ ನಿತ್ಯಹರಿದ್ವರ್ಣದ ತೋಟ-ಕಾಡು-ಗುಡ್ಡದ ಆವರಣ. ಹಿಂಭಾಗದಲ್ಲೂ ಬೆಟ್ಟಗಳ ಸಾಲು. ಹಸಿರ ರಾಶಿಯ ನಡುವೆ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಿ ಜನರ ಬದುಕು ಹಸನಾಗಿಸಿದ ಚೂರಲ್‌ಮಲ ಸರ್ಕಾರಿ ವೃತ್ತಿಪರ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಚಿತ್ರಣವಿದು.
ಮುಂಡಕ್ಕೈ, ಪುಂಜಿರಿಮಟ್ಟಂ ಮತ್ತು ಚೂರಲ್‌ಮಲದಲ್ಲಿ ಸಂಭವಿಸಿದ ಭೂಕುಸಿತದ ನಂತರ ಈ ಶಾಲೆಯ ಪರಿಸರ ಗುರುತು ಸಿಗದಷ್ಟು ಬದಲಾಗಿದೆ. ಮೈದಾನವಿದ್ದ ಜಾಗ ಈಗ ‘ಸ್ಮಶಾನ’. ಮುಂಡಕ್ಕೈಯಿಂದ ಕೆಸರುಮಿಶ್ರಿತ ನೀರು ಎಳೆದುಕೊಂಡು ಬಂದ ಅನೇಕ ಮಂದಿಯ ಮೃತದೇಹಗಳು ಸಿಕ್ಕಿದ್ದು ಇಲ್ಲೇ. ಬಂಡೆಕಲ್ಲುಗಳು ಮತ್ತು ಗುಡ್ಡದಂತೆ ಬಿದ್ದಿರುವ ಮಣ್ಣಿನ ರಾಶಿಯಡಿ ಇನ್ನೂ ದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಮುಂಡಕ್ಕೈಯಲ್ಲಿದ್ದ ಶಾಲೆಗಳೆಲ್ಲವೂ ಮಹಾಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಚೂರಲ್‌ಮಲ ಶಾಲೆಗೆ ಕಲ್ಲು ಮತ್ತು ಮರದ ದಿಮ್ಮಿ ಬಡಿದು ಅಲ್ಪಸ್ವಲ್ಪ ಹಾನಿಯಾಗಿದ್ದರೂ ಕುಸಿಯದೆ ಗಟ್ಟಿಯಾಗಿ ನಿಂತಿದೆ. ಗ್ರಾಮೀಣ ಜನರ ಬದುಕಿಗೆ ತಿರುವು ನೀಡಿದ ಶಾಲೆ ಹಾಗೆ ದೃಢವಾಗಿ ನಿಂತ ಕಾರಣ ಅನೇಕ ಮಂದಿಯ ಜೀವ ಉಳಿದಿದೆ, ಚೂರಲ್‌ಮಲ ಪಟ್ಟಣದ ಬಹುಪಾಲು ಕೂಡ ಉಳಿದಿದೆ.
‘ಶಾಲೆಯ ಗೋಡೆಗಳು ನೀರನ್ನು ತಡೆಯದೇ ಇದ್ದಿದ್ದರೆ ಚೂರಲ್‌ಮಲ ಪಟ್ಟಣದ ಕುರುಹೇ ಇರುತ್ತಿರಲಿಲ್ಲ’ ಎನ್ನುತ್ತಾರೆ ಸ್ಥಳೀಯರು.
ಹಂತಹಂತವಾಗಿ ಬೆಳೆದ ಶಾಲೆ ಇದು. ಶಾಲೆಯ ಅಭಿವೃದ್ಧಿ ಆದಂತೆಲ್ಲ ಮುಂಡಕ್ಕೈ, ಚೂರಲ್‌ಮಲ, ವೆಳ್ಳಾರ್‌ಮಲ, ಅಟ್ಟಮಲ ಮತ್ತು ಪುಂಜಿರಿಮಟ್ಟಂ ಗ್ರಾಮಗಳ ಜನರ ಬದುಕು ಬದಲಾಗಿತ್ತು. ಪ್ರಾಥಮಿಕ ಹಂತದಲ್ಲಿದ್ದ ಶಾಲೆ ಹೈಸ್ಕೂಲ್ ಆಗಿ, ನಂತರ ಪಿಡಿಸಿ (ಪಿಯುಸಿ) ವರೆಗೆ ಇಲ್ಲೇ ಕಲಿಯಲು ಅವಕಾಶವಾಯಿತು. ಇದರಿಂದ ಕಾಲೇಜಿಗೆ ಹೋಗುವವರ ಸಂಖ್ಯೆ ಹೆಚ್ಚಾಯಿತು. ಮೇಪ್ಪಾಡಿ ಮತ್ತು ಕಲ್ಪೆಟ್ಟದಲ್ಲಿರುವ ಪದವಿ ಕಾಲೇಜಿನಲ್ಲಿ ಹೆಚ್ಚಿನ ಶಿಕ್ಷಣ ಪಡೆದವರು ಉನ್ನತ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ತೆರಳಿದರು. ಉದ್ಯೋಗ ಲಭಿಸಿತು. ಇದರಿಂದ ಇಲ್ಲಿನವರ ಬದುಕು ಸಂಪೂರ್ಣ ಬದಲಾಯಿತು.
‘ನಾನು ಶಾಲೆಗೆ ಹೋಗುವಾಗ ಇಲ್ಲಿ 10ನೇ ತರಗತಿ ವರೆಗೆ ಮಾತ್ರ ಶಿಕ್ಷಣವಿತ್ತು. ಚಹಾ ತೋಟಗಳಲ್ಲಿ ಕೆಲಸ ಮಾಡುತ್ತ ‘ಪಾಡಿ’ಗಳಲ್ಲಿ (ಲೈನ್‌ಮನೆಗಳು) ವಾಸಿಸುತ್ತಿದ್ದವರ ಮಕ್ಕಳು ಓದಿ ಉನ್ನತ ಶಿಕ್ಷಣ ಮತ್ತು ಉದ್ಯೋಗ ಗಳಿಸಿದ್ದರಿಂದ ಪಾಡಿಗಳ ಬದುಕು ಇಲ್ಲದಾಯಿತು. ಚಂದದ ಮನೆಗಳು ನಿರ್ಮಾಣವಾದವು. ಪ್ರವಾಸೋದ್ಯಮ ಇಲ್ಲಿಯ ವರೆಗೆ ವಿಸ್ತರಿಸಿತು. ಬದುಕು ಕಳೆಗಟ್ಟಿತು. ಅದರೆ ವರ್ಷಗಳ ಶ್ರಮ ಒಂದೇ ರಾತ್ರಿಯಲ್ಲಿ ನೆಲಸಮವಾಯಿತು, ಕನಸು ನುಚ್ಚುನೂರಾಯಿತು’ ಎಂದು ಸ್ಥಳೀಯ ನಿವಾಸಿ ಅಜಯ್ ಹೇಳಿದರು.
ಜುಲೈ 27ರಂದು ಕೊನೆಯದಾಗಿ ಈ ಶಾಲೆಗಳಲ್ಲಿ ತರಗತಿಗಳು ನಡೆದಿದ್ದವು. 28 ಭಾನುವಾರ. 29ರಂದು ಧಾರಾಕಾರ ಮಳೆ ಎಂದು ರಜೆ ನೀಡಲಾಗಿತ್ತು. ಅಂದು ತಡರಾತ್ರಿ ಉಂಡು ಮಲಗಿದವರಲ್ಲಿ ಹಲವರು ಮತ್ತೆ ಏಳಲೇ ಇಲ್ಲ. ಇವರಲ್ಲಿ ವಿದ್ಯಾರ್ಥಿಗಳೂ ಇದ್ದರು. ದುರಂತದಲ್ಲಿ ಒಟ್ಟು 36 ಮಕ್ಕಳು ಮೃತರಾಗಿದ್ದು 17 ಮಂದಿಯನ್ನು ಇನ್ನೂ ಪತ್ತೆ ಮಾಡಲು ಆಗಿಲ್ಲ.
ಶಾಲೆಯ ಬ್ಲ್ಯಾಕ್‌ಬೋರ್ಡ್‌ಗಳಲ್ಲಿ 27ರಂದು ಬರೆದ ವಿದ್ಯಾರ್ಥಿಗಳ ಸಂಖ್ಯೆ ಇದೆ. ಅವರಲ್ಲಿ ಹಲವರು ಇನ್ನು ಈ ಶಾಲೆಯ ಕೊಠಡಿಗಳಿಗೆ ಬರುವುದಿಲ್ಲ. ಕೆಲವು ಕೊಠಡಿಗಳಲ್ಲಿ ಮಕ್ಕಳು ಬಿಡಿಸಿದ ಚಿತ್ರಗಳಿವೆ. ಅದರ ಹಿಂದಿನ ಸೃಜನಶೀಲ ಮನಸ್ಸು ಈಗ ಇದೆಯೋ ಇಲ್ಲವೋ ಎಂಬುದು ಯಾರಿಗೂ ಸ್ಪಷ್ಟವಿಲ್ಲ.
ಕೆಸರು ತುಂಬಿದ ಕೊಠಡಿಗಳ ಮುಂದೆ ಕೆಲವು ಕಡೆ ದೊಡ್ಡದೊಡ್ಡ ಮರದ ದಿಮ್ಮಿಗಳು ಅಪ್ಪಳಿಸಿವೆ. ಕೆಳಗಿನ ಭಾಗದಲ್ಲಿರುವ ಕಟ್ಟಡದ ಪಿಲ್ಲರ್‌ಗಳು ನೀರು ಮತ್ತು ಬಂಡೆಗಳ ಹೊಡೆತಕ್ಕೆ ಭಾಗಶಃ ಹಾನಿಗೊಳಗಾಗಿವೆ. ಇಲ್ಲಿ ಓಡಾಡಿದ, ಹಾಡಿದ, ನಲಿದ, ಶಿಕ್ಷಕರ ಪೆಟ್ಟು ತಿಂದ ಮಕ್ಕಳು ಇನ್ನೆಂದೂ ಕಾಣಸಿಗಲಾರರು ಎಂಬ ವೇದನೆಯೊಂದಿಗೆ ಬಿಕ್ಕಳಿಸುತ್ತಿರುವಂತಿವೆ ಇಲ್ಲಿನ ಒಂದೊಂದು ಗೋಡೆಯೂ.. ಕಂಬವೂ.. ಕೊಠಡಿಯೂ.
ಸುಂದರ ವಾತಾವಣದಲ್ಲಿ ಕಲಿಯಲು ಹಿತವಾಗುತ್ತಿತ್ತು. ನಾನು 8ನೇ ತರಗತಿಯಲ್ಲಿದ್ದೆ. ಮೂವರು ಗೆಳೆಯರು ಇಲ್ಲವಾಗಿದ್ದಾರೆ. ಇನ್ನು ಮುಂದೆ ದೂರದ ಶಾಲೆಗೆ ಹೋಗಬೇಕು.–ಹೃಸ್ವಾನ್ ವೆಳ್ಳಾರ್‌ಮಲ ಶಾಲೆಯ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.