ADVERTISEMENT

Wayanad Landslides | ವಯನಾಡ್‌ನಲ್ಲಿ ಶೀಘ್ರವೇ ತರಗತಿಗಳ ಆರಂಭ: ಶಿವನ್‌ಕುಟ್ಟಿ

ಪಿಟಿಐ
Published 6 ಆಗಸ್ಟ್ 2024, 14:11 IST
Last Updated 6 ಆಗಸ್ಟ್ 2024, 14:11 IST
   

ವಯನಾಡ್‌: ಭೂಕುಸಿತ ಸಂಭವಿಸಿದ ವಯನಾಡ್‌ನ ಸ್ಥಳಗಳಲ್ಲಿ ಸದ್ಯ ಸಂತ್ರಸ್ತರ ಕಾಳಜಿ ಕೇಂದ್ರಗಳಾಗಿ ಶಾಲೆಗಳು ಪರಿವರ್ತಿತವಾಗಿದ್ದು, ಅಲ್ಲಿ ಶೀಘ್ರವೇ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ಕೇರಳ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ.ಶಿವನ್‌ ಕುಟ್ಟಿ ಮಂಗಳವಾರ ತಿಳಿಸಿದರು.

ದುರಂತದಿಂದಾಗಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದೂ ಹೇಳಿದರು.

‘ಹಲವು ಶಾಲೆಗಳನ್ನು ಕಾಳಜಿ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಶಿಕ್ಷಕರು, ಪೋಷಕರು ಮತ್ತು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, 10–12 ದಿನಗಳಲ್ಲಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ತರಗತಿಗಳ ಆರಂಭಕ್ಕೂ ಮುನ್ನ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕಾದ ಅಗತ್ಯವಿದೆ. ಭೂಕುಸಿತ ಪೀಡಿತ ಪ್ರದೇಶಗಳಲ್ಲಿರುವ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ನಿರ್ದೇಶನ ನೀಡಿದ್ದಾರೆ’ ಎಂದು ಹೇಳಿದರು.

ಭೂಕುಸಿತದಲ್ಲಿ 36 ಮಕ್ಕಳು ಮೃತಪಟ್ಟಿದ್ದಾರೆ, 17 ಮಕ್ಕಳು ನಾಪತ್ತೆಯಾಗಿದ್ದಾರೆ. 316 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಐವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

276 ಮಕ್ಕಳು ಪುಸ್ತಕಗಳನ್ನು ಕಳೆದುಕೊಂಡಿದ್ದಾರೆ, 438 ಮಕ್ಕಳು ಪಠ್ಯ ಸಾಮಗ್ರಿಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.