ಬೆಂಗಳೂರು: ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಅಡಿ ಇಟ್ಟಿರುವ ಪ್ರಿಯಾಂಕಾ, ನಾಮಪತ್ರ ಸಲ್ಲಿಕೆಗೂ ಮುನ್ನ ಕಲ್ಪೆಟ್ಟಾದಲ್ಲಿ ಭಾರಿ ರೋಡ್ ಶೋ ನಡೆಸಿದ್ದರು. ಅವರಿಗೆ ಅವರ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ, ಪತಿ ರಾಬರ್ಟ್ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದ್ದರು. ಬಳಿಕ ನಾಮಪತ್ರ ಸಲ್ಲಿಸಲಾಗಿತ್ತು.
ಖರ್ಗೆ ಅವರು ಕೊಠಡಿಯ ಬಾಗಿಲಿನ ಹಿಂದೆ ನಿಂತಿರುವಂತೆ ಕಾಣುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ದಲಿತ ನಾಯಕ ಖರ್ಗೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಪ್ರಿಯಾಂಕಾ ಅವರು ವಯನಾಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ಎಲ್ಲಿದ್ದಿರಿ ಖರ್ಗೆ ಸಾಹೇಬರೇ?' ಎಂದು ಕೇಳಿದ್ದಾರೆ.
ಮುಂದುವರಿದು, 'ಕುಟುಂಬದವರಲ್ಲದ ಕಾರಣ (ಖರ್ಗೆ) ಅವರನ್ನು ಹೊರಗಿಡಲಾಗಿದೆ. ಸೋನಿಯಾ ಕುಟುಂಬದ ಅಹಂಕಾರದ ಎದುರು ಸ್ವಾಭಿಮಾನ ಮತ್ತು ಘನತೆ ಬಲಿಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, 'ಅವರು, ಹಿರಿಯ ದಲಿತ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನೇ ಈ ರೀತಿ ನಡೆಸಿಕೊಳ್ಳುತ್ತಾರೆ ಎಂದರೆ, ವಯನಾಡಿನ ಸಾಮಾನ್ಯ ಜನರನ್ನು ಹೇಗೆ ಕಾಣಬಲ್ಲರು ಎಂಬುದನ್ನು ಊಹಿಸಿಕೊಳ್ಳಿ' ಎಂದು ಅಚ್ಚರಿಯಿಂದ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೂ ಈ ವಿಡಿಯೊ ಹಂಚಿಕೊಂಡಿದ್ದು, 'ಎಐಸಿಸಿ ಅಥವಾ ಪಿಸಿಸಿ (ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷರೇ ಇರಲಿ, ತಾನು ರಬ್ಬರ್ ಸ್ಟಾಂಪ್‌ಗಳು ಎಂದು ಪರಿಗಣಿಸುವ ನಾಯಕರಿಗೆ ಅವಮಾನ ಮಾಡುವುದನ್ನು ಈ ಕುಟುಂಬವು ಹೆಮ್ಮೆಯ ಸಂಗತಿ ಎಂದು ಪರಿಗಣಿಸುತ್ತದೆಯೇ?' ಎಂದು ಕೇಳಿದ್ದಾರೆ.
ಹಿರಿಯ ಸಂಸದೀಯಪಟು ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ರೀತಿ ಅವಮಾನಿಸುತ್ತಿರುವುದು ತೀವ್ರ ಬೇಸರ ಮೂಡಿಸಿದೆ ಎಂದೂ ಪ್ರತಿಕ್ರಿಯಿಸಿದ್ದಾರೆ.
ಪ್ರಿಯಾಂಕಾ ಪಕ್ಕದಲ್ಲೇ ಖರ್ಗೆ!
ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ವೇಳೆ ಖರ್ಗೆ ಅವರು ಪ್ರಿಯಾಂಕಾ ಪಕ್ಕದಲ್ಲೇ ಕುಳಿತಿರುವುದು ಹಲವು ಚಿತ್ರಗಳಲ್ಲಿ ಕಂಡುಬಂದಿದೆ.
ಅಧಿಕಾರಿಯ ಕೊಠಡಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಪತ್ರಗಳಿಗೆ ಸಹಿ ಹಾಕುವಾಗ ಪ್ರಿಯಾಂಕಾ ಅವರ ಅಕ್ಕ–ಪಕ್ಕದಲ್ಲಿ ಖರ್ಗೆ ಹಾಗೂ ರಾಹುಲ್ ಗಾಂಧಿ ಕುಳಿತಿರುವುದು ಮತ್ತು ಅವರ ಹಿಂದಿನ ಸಾಲಿನಲ್ಲಿ ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಅವರು ಇರುವುದು ಚಿತ್ರಗಳಲ್ಲಿವೆ.
ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಿಯಾಂಕಾ, 'ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಯಾಗಿ ವಯನಾಡಿನಿಂದ ಕಣಕ್ಕಿಳಿಯಲು ಅವಕಾಶ ಕಲ್ಪಿಸಿದ ಖರ್ಗೆ ಅವರಿಗೆ ಆಭಾರಿಯಾಗಿರುತ್ತೇನೆ' ಎಂದು ಹೇಳಿದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಡೆಸಿದ ಪ್ರಿಯಾಂಕಾ ಗಾಂಧಿ
ಜನರತ್ತ ಕೈಬೀಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ
ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಿಯಾಂಕಾ ಗಾಂಧಿ ಅವರ ಅಕ್ಕ–ಪಕ್ಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ
ನಾಮಪತ್ರ ಸಲ್ಲಿಕೆಗೂ ಮುನ್ನ ಪತ್ರಗಳಿಗೆ ಸಹಿ ಹಾಕಿದ ಪ್ರಿಯಾಂಕಾ ಗಾಂಧಿ
ನಾಮಪತ್ರ ಸಲ್ಲಿಕೆ ವೇಳೆ ಪ್ರಿಯಾಂಕಾ ಗಾಂಧಿ
ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.