ADVERTISEMENT

ಮನ್‌ಸುಖ್ ಹಿರೆನ್ ನಿಗೂಢ ಸಾವು ಪ್ರಕರಣ: ವಾಜೆಗೆ ಮಧ್ಯಂತರ ಜಾಮೀನು ನಿರಾಕರಣೆ

ಮನ್‌ಸುಖ್ ಹಿರೆನ್ ನಿಗೂಢ ಸಾವು ಪ್ರಕರಣ

ಪಿಟಿಐ
Published 13 ಮಾರ್ಚ್ 2021, 13:06 IST
Last Updated 13 ಮಾರ್ಚ್ 2021, 13:06 IST
ಸಚಿನ್ ವಾಜೆ
ಸಚಿನ್ ವಾಜೆ   

ಮುಂಬೈ: ಆಟೊಮೊಬೈಲ್ ಬಿಡಿಭಾಗಗಳ ಡೀಲರ್ ಮನ್‌ಸುಖ್ ಹಿರೆನ್‌ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಟೀಕೆಗೊಳಗಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಮಧ್ಯಂತರ ಜಾಮೀನು ನೀಡಲು ಠಾಣಾ ಜಿಲ್ಲಾ ಸೆಷೆನ್ಸ್ ನ್ಯಾಯಾಲಯ ಶನಿವಾರ ನಿರಾಕರಿಸಿದೆ.

ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶರಾದ ಶೈಲೇಂದ್ರ ತಂಬೆ ಅವರು, ‘ಪ್ರಕರಣದಲ್ಲಿ ಅರ್ಜಿದಾರರಾದ ಸಚಿನ್ ವಾಜೆ ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳು ಮತ್ತು ಪುರಾವೆಗಳಿವೆ. ಈ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡುವುದಿಲ್ಲ. ಈ ಪ್ರಕರಣದಲ್ಲಿ ಸಚಿನ್ ಅವರನ್ನು ವಿಚಾರಗೊಳಪಡಿಸುವ ಅಗತ್ಯವಿದೆ’ ಎಂದು ಹೇಳಿದರು.

‘ವಾಜೆ ಅವರ ವಿರುದ್ಧದ ಆರೋಪಗಳಲ್ಲಿ ಸೆಕ್ಷನ್ 302 (ಕೊಲೆ), ಸೆಕ್ಷನ್ 201 (ಸಾಕ್ಷ್ಯಗಳ ನಾಶ) ಮತ್ತು ಐಪಿಸಿಯ 120 (ಬಿ) (ಕ್ರಿಮಿನಲ್ ಪಿತೂರಿ) ಸೇರಿವೆ. ಇವರು ಗಂಭೀರ ಅಪರಾಧಗಳಾಗಿವೆ. ಅಷ್ಟೇ ಅಲ್ಲ, ಆರೋಪಿ ಸಚಿನ್, ಫೆ. 27, 28ರಂದು ಮನ್‌ಸುಖ್ ಹಿರೆನ್ ಅವರೊಂದಿಗೆ ಮುಂಬೈನಲ್ಲಿದ್ದರು ಎನ್ನುವುದು ತಿಳಿದುಬಂದಿದೆ. ದೂರಿನಲ್ಲಿ ಹಿರೆನ್ ಅವರ ಪತ್ನಿ ಕೂಡಾ ನಿರ್ದಿಷ್ಟವಾಗಿ ಸಚಿನ್ ವಾಜೆ ಅವರ ಹೆಸರನ್ನು ಹೇಳಿದ್ದಾರೆ’ ಎಂದು ನ್ಯಾಯಾಲಯವು ತಿಳಿಸಿದೆ.

ADVERTISEMENT

‘ಎಫ್‌ಐಆರ್‌ನಲ್ಲಿ ಹಿರೆನ್ ಅವರ ಪತ್ನಿ ನೇರವಾಗಿ ವಾಜೆ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಹಾಗಾಗಿ, ಈ ಪ್ರಕರಣವು ತನಿಖೆಯ ಆರಂಭಿಕ ಹಂತದಲ್ಲಿದೆ ಎನ್ನುವ ತೀರ್ಮಾನಕ್ಕೆ ಬರಲಾಗಿದೆ’ ಎಂದೂ ನ್ಯಾಯಾಲಯವು ಹೇಳಿದೆ.

ತನಿಖೆಗೆ ಸಹಕರಿಸುವುದಾಗಿ ಕೋರಿ, ಬಂಧನಕ್ಕೆ ಮುನ್ನವೇ ಸಚಿನ್ ಪರ ವಕೀಲರಾದ ಎ.ಎಂ. ಕೇಲ್ಕರ್ ಮಧ್ಯಂತ ಜಾಮೀನಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಕಡು ಅವರು, ಪ್ರಕರಣದಲ್ಲಿ ತನಿಖೆಯು ನಿರ್ಣಾಯಕ ಹಂತದಲ್ಲಿದೆ. ಹಾಗಾಗಿ, ಆರೋಪಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು.

ಸಚಿನ್ ಅವರ ಅರ್ಜಿ ವಿಚಾರಣೆಯನ್ನು ಮಾರ್ಚ್‌ 19ಕ್ಕೆ ಮುಂದೂಡಿದ ನ್ಯಾಯಾಲಯವು, ಈ ವೇಳೆ ಅರ್ಜಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸುವಂತೆ ಎನ್‌ಟಿಎಸ್‌ ತನಿಖಾಧಿಕಾರಿಗೆ ನಿರ್ದೇಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.