ADVERTISEMENT

ಸಿಬಿಐ ತನಿಖೆ: ಕೇಂದ್ರ ಸರ್ಕಾರದ ವಿರುದ್ಧದ ಅರ್ಜಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್

ಸಾಮಾನ್ಯ ಒಪ್ಪಿಗೆ ಹಿಂಪಡೆದಿರುವ ಪಶ್ಚಿಮ ಬಂಗಾಳ ಸರ್ಕಾರ

ಪಿಟಿಐ
Published 10 ಜುಲೈ 2024, 16:12 IST
Last Updated 10 ಜುಲೈ 2024, 16:12 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಒಪ್ಪಿಗೆ ಹಿಂಪಡೆದಿದ್ದರೂ ಸಿಬಿಐ ವಿವಿಧ ಪ್ರಕರಣಗಳ ತನಿಖೆಯನ್ನು ಮುಂದುವರಿಸುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸರ್ಕಾರವು, ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಸಿದ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆಗೆ ಯೋಗ್ಯವೆಂದು ಪರಿಗಣಿಸಿದೆ.  

ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ಪೀಠವು, ಈ ಮೊಕದ್ದಮೆಯ ವಿಚಾರಣೆ ಅರ್ಹತೆ ಬಗ್ಗೆ ಕೇಂದ್ರ ಸರ್ಕಾರವು ಎತ್ತಿದ ಪ್ರಾಥಮಿಕ ಆಕ್ಷೇಪಣೆಗಳನ್ನು ತಿರಸ್ಕರಿಸಿತು. ಕಾನೂನಿನ ಪ್ರಕಾರ ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪೀಠ ಒತ್ತಿಹೇಳಿತು.

‘ಈ ಮೊಕದ್ದಮೆಯು ತನ್ನದೇ ಆದ ಅರ್ಹತೆಯ ಮೇಲೆ ಕಾನೂನಿನ ಪ್ರಕಾರ ಮುಂದುವರಿಯುತ್ತದೆ’ ಎಂದೂ ನ್ಯಾಯಮೂರ್ತಿ ಗವಾಯಿ ಅವರು ಆದೇಶದ ಪ್ರಮುಖಾಂಶಗಳನ್ನು ಪ್ರಕಟಿಸುವಾಗ ಹೇಳಿದರು.

ADVERTISEMENT

ಪೀಠವು ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಆಗಸ್ಟ್‌ 13ಕ್ಕೆ ನಿಗದಿಪಡಿಸಿದೆ. ಈ ಮೊಕದ್ದಮೆ ಸಂಬಂಧ ಮೇ 8ರಂದು ತನ್ನ ಆದೇಶವನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿತ್ತು.

ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್‌ಪಿಇ) ಕಾಯ್ದೆ,1946 ರ ನಿಬಂಧನೆಯ ಪ್ರಕಾರ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧಗಳ ಪ್ರಕರಣಗಳ ಮೇಲೆ ಕೇಂದ್ರೀಯ ಜಾಗೃತ ಆಯೋಗವು ನಿಯಂತ್ರಣವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

‘ನಮ್ಮ ದೃಷ್ಟಿಯಲ್ಲಿ, ಸಿಬಿಐ ಒಂದು ಅಂಗ ಅಥವಾ ಸಂಸ್ಥೆಯಾಗಿದೆ. ಇದು ಕೇಂದ್ರ ಸರ್ಕಾರದ ಮೇಲ್ವಿಚಾರಣೆಯಲ್ಲಿದೆ’ ಎಂದು ಅದು ಅಭಿಪ್ರಾಯಪಟ್ಟಿದೆ. 

ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ರಾಜ್ಯವು 2018ರ ನವೆಂಬರ್ 16ರಂದು ತನ್ನ ಒಪ್ಪಿಗೆ ಹಿಂತೆಗೆದುಕೊಂಡ ನಂತರ, ಕೇಂದ್ರವು ತನ್ನ ತನಿಖಾ ಸಂಸ್ಥೆಯನ್ನು ತನಿಖೆಗಾಗಿ ರಾಜ್ಯಕ್ಕೆ ಕಳುಹಿಸಲು ಅವಕಾಶವಿಲ್ಲ. ಸಿಬಿಐ ಅಧಿಕಾರ ಚಲಾಯಿಸಲು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕು ಎಂದು ವಾದಿಸಿದರು. 

ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಸರ್ಕಾರ ಅಥವಾ ಅದರ ಇಲಾಖೆಗಳು ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗಳ ಮೇಲೆ ಯಾವುದೇ ಮೇಲ್ವಿಚಾರಣೆಯ ನಿಯಂತ್ರಣ ಹೊಂದಿಲ್ಲ. ಈ ವಿಚಾರದಲ್ಲಿ ಕೇಂದ್ರದ ವಿರುದ್ಧ ಕ್ರಮಕ್ಕೆ ಯಾವುದೇ ಕಾರಣವಿಲ್ಲ ಎಂದು ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.