ಕೋಲ್ಕತ್ತ: ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಡೈರಿಗಳಲ್ಲಿ ರಹಸ್ಯ ಸಂಕೇತಗಳಿವೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮೂಲಗಳು ತಿಳಿಸಿವೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ವರ್ಗಾವಣೆಯಾಗಿರುವ ಹಣದ ಕುರಿತು ಈ ಸಂಕೇತಗಳಿಂದ ಮಹತ್ವದ ಸುಳಿವು ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ರಹಸ್ಯ ಸಂಕೇತಗಳಲ್ಲಿ ಹಣ ಸಂಗ್ರಹಕ್ಕೆ ಸಂಬಂಧಿಸಿದ ವಿಚಾರಗಳು ಹಾಗೂ ಇತರ ಮಹತ್ವದ ವಿಷಯಗಳೂ ಅಡಕವಾಗಿರಬಹುದು ಎನ್ನಲಾಗಿದೆ.
ಸಂಕೇತಗಳ ರಹಸ್ಯ ತಿಳಿಯಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ‘ಡಿಕೋಡಿಂಗ್’ ತಜ್ಞರ ನೆರವು ಪಡೆಯುತ್ತಿದ್ದಾರೆ ಎಂದೂ ಮೂಲಗಳು ಮಾಹಿತಿ ನೀಡಿವೆ.
ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ಆಗಸ್ಟ್ 3ರವರೆಗೆ ನಮ್ಮ ವಶದಲ್ಲಿರಲಿದ್ದು, ಅದಕ್ಕೂ ಮುನ್ನವೇ ರಹಸ್ಯ ಸಂಕೇತಗಳು ಏನೆಂಬುದನ್ನು ತಿಳಿಯುವುದು ನಮ್ಮ ಉದ್ದೇಶವಾಗಿದೆ. ಇದರಿಂದ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವುದು ಸಾಧ್ಯವಾಗಲಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೈಬರಹದಲ್ಲಿರುವ ಕೆಲವು ಸಂಕೇತಗಳು ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ಅವರ ಕೈಬರಹವನ್ನು ಹೋಲುತ್ತಿಲ್ಲ. ಇದು ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿರುವ ಅನುಮಾನವನ್ನೂ ಹುಟ್ಟುಹಾಕಿದೆ ಎಂದೂ ಅಧಿಕಾರಿ ಹೇಳಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಜುಲೈ 22ರಂದು ಪಶ್ಚಿಮ ಬಂಗಾಳದ ಹಲವೆಡೆ ಶೋಧ ನಡೆಸಿದ್ದ ಇ.ಡಿ. ಅಧಿಕಾರಿಗಳು ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿದ್ದರು. ಅರ್ಪಿತಾ ಮುಖರ್ಜಿ ಮನೆಯಿಂದ ಅಧಿಕಾರಿಗಳು ₹20 ಕೋಟಿ ನಗದನ್ನು ವಶಕ್ಕೆ ಪಡೆದಿದ್ದರು. ಈ ಹಣ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎಂದು ಅರ್ಪಿತಾ ಮುಖರ್ಜಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.