ಜಾರ್‌ಗ್ರಾಮ್: ‘ಪಶ್ಚಿಮ ಬಂಗಾಳದ ಯಾವುದೇ ವಿದ್ಯಾರ್ಥಿ ಮೇಲೂ ಬಂಗಾಳಿ ಭಾಷೆಯನ್ನು ಹೇರುವ ಉದ್ದೇಶ ಸರ್ಕಾರಕ್ಕಿಲ್ಲ. ಬದಲಿಗೆ ತ್ರಿಭಾಷಾ ಸೂತ್ರದಲ್ಲಿ ಬಂಗಾಳಿಯನ್ನೂ ಕಲಿಯಲಿ ಎಂಬುದಷ್ಟೇ ನಮ್ಮ ಆಶಯ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಬಂಗಾಳಿಯನ್ನು ಹೇರಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು, ‘ಶಾಲೆಗಳಲ್ಲಿ ಕಲಿಸಲಾಗುವ ಮೂರು ಭಾಷೆಗಳಲ್ಲಿ ಪ್ರಥಮ ಭಾಷೆಯನ್ನು ವಿದ್ಯಾರ್ಥಿಗಳ ಇಚ್ಛೆಯಂತೆಯೇ ಕಲಿಸಲಾಗುವುದು’ ಎಂದಿದ್ದಾರೆ.
ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಬಂಗಾಳಿ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಡ್ಡಾಯಗೊಳಿಸಿದ ಕುರಿತ ಸುದ್ದಿಗೆ ರಾಜ್ಯದಲ್ಲಿ ವ್ಯಾಪಕ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.
‘ಕೆಲ ವ್ಯಕ್ತಿಗಳು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಸಂಪುಟ ಸಭೆಯಲ್ಲಿ ತ್ರಿಭಾಷಾ ಸೂತ್ರದ ಕುರಿತು ಚರ್ಚೆ ನಡೆದಿದೆ. ಬಂಗಾಳಿ ಮಾಧ್ಯಮದಲ್ಲಿ ಕಲಿಯುತ್ತಿರುವವರು ಪ್ರಥಮ ಭಾಷೆಯಾಗಿ ಬಂಗಾಳಿಯನ್ನೇ ಕಲಿಯುತ್ತಾರೆ. ಇತರ ಎರಡು ಭಾಷೆಗಳಲ್ಲಿ ಇಂಗ್ಲಿಷ್, ಹಿಂದಿ, ನೇಪಾಳಿ, ಗುರ್ಮುಖಿ, ಅಲ್ಚಿಕಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ಮಮತಾ ತಿಳಿಸಿದ್ದಾರೆ.
‘ಅಲ್ಚಿಕಿ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನೇ ಪ್ರಥಮ ಭಾಷೆಯಾಗಿ ಪ್ರಾಥಮಿಕ ಶಾಲೆಯಿಂದ ಕಲಿಯುತ್ತಾರೆ. ನಂತರದಲ್ಲಿ ಬಂಗಾಳಿ, ಹಿಂದಿ ಹಾಗೂ ಇಂಗ್ಲಿಷ್‌ಗಳಲ್ಲಿ ಎರಡನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲೂ ಬಂಗಾಳಿ ಭಾಷೆ ಕಲಿಕೆ ಕಡ್ಡಾಯ
‘ಡಾರ್ಜಲಿಂಗ್ ಭಾಗದಲ್ಲಿ ನೇಪಾಳಿ ಮಾಧ್ಯಮ ಶಾಲೆಗಳು ಅಧಿಕ ಸಂಖ್ಯೆಯಲ್ಲಿವೆ. ಅಲ್ಲಿ ನೇಪಾಳಿಯೇ ಪ್ರಥಮ ಭಾಷೆಯಾಗಿರಲಿದೆ. ಹೀಗೆ ಎಲ್ಲಿ ಮಾತೃಭಾಷೆಯ ಮಾಧ್ಯಮಗಳಿವೆಯೋ ಅಲ್ಲಿ ಆಯಾ ಭಾಷೆಯನ್ನೇ ಪ್ರಥಮ ಭಾಷೆಯನ್ನಾಗಿ ಕಲಿಯಲು ಅವಕಾಶವಿದೆ. ಆದರೆ ಈ ಕುರಿತು ಅನಗತ್ಯ ಗೊಂದಲ ಸೃಷ್ಟಿಸಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ’ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬಂಗಾಳಿ ಮಾಧ್ಯಮ ಶಾಲೆಗಳಲ್ಲಿ ಬಂಗಾಳಿಯನ್ನು ಪ್ರಥಮ ಭಾಷೆಯ್ನನಾಗಿ ಹಾಗೂ ಇತರ ಎರಡು ಭಾಷೆಗಳ ಆಯ್ಕೆಯಲ್ಲಿ ಇಂಗ್ಲಿಷ್, ನೇಪಾಳಿ, ಉರ್ದು, ಅಲ್ಚಿಕಿ ಹಾಗೂ ಇನ್ನಿತರ ಭಾಷೆಗಳ ಆಯ್ಕೆಗೆ ಅವಕಾಶವಿದೆ’ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರದ ನೂತನ ಶಿಕ್ಷಣ ನೀತಿಯಲ್ಲಿ 5 ರಿಂದ 8ನೇ ತರಗತಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯುವಂತೆ ಸೂತ್ರ ರಚಿಸಲಾಗಿದೆ. ಇದರಲ್ಲಿ ಬಂಗಾಳಿ ಭಾಷೆಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಎರಡು ಭಾಷೆಗಳನ್ನು ಕಲಿಯಬೇಕು. ಅದರಲ್ಲಿ ಒಂದು ಮಾತೃ ಭಾಷೆಯಾಗಿರಬೇಕು. ಮಾಧ್ಯಮಿಕ ಶಾಲೆಯಲ್ಲಿ ಒಂದು ಪ್ರಾದೇಶಿಕ ಭಾಷೆ ಮತ್ತು ಒಂದು ಅನ್ಯ ಭಾಷೆಯನ್ನು ಕಲಿಯಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.