ನವದೆಹಲಿ: ‘ಭಾರತ –ಚೀನಾ ಗಡಿಯಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಲು ನಾವು ಯತ್ನಿಸುತ್ತಿದ್ದೇವೆ. ಈ ಗುರಿ ಸಾಧಿಸಲು ಉಭಯ ರಾಷ್ಟ್ರಗಳು ಪರಸ್ಪರ ಭರವಸೆ ನೀಡಬೇಕಾಗಿದೆ’ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದರು.
ಪೂರ್ವ ಲಡಾಖ್‌ನಲ್ಲಿ ಅನಿಶ್ಚಿತತೆ ಅಂತ್ಯಗೊಳಿಸಲು ಒಪ್ಪಂದಕ್ಕೆ ಬರಲಾಗಿದೆ ಎಂದು ಭಾರತ ಪ್ರಕಟಿಸಿದ ಹಿಂದೆಯೇ ಅವರು ಈ ಮಾತು ಹೇಳಿದ್ದಾರೆ. ರಕ್ಷಣಾ ಇಲಾಖೆಯ ಚಿಂತಕರ ಚಾವಡಿ ಯುಎಸ್‌ಐ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದರು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಒಪ್ಪಂದಕ್ಕೆ ಬರಲಾಗಿದೆ ಎಂಬುದನ್ನು ಸೋಮವಾರ ಪ್ರಕಟಿಸಿದ್ದರು. ಗಡಿಯಲ್ಲಿ,ಪೂರ್ವ ಲಡಾಖ್ ಬಳಿ ನಾಲ್ಕು ವರ್ಷಗಳಿಂದ ಮೂಡಿರುವ ಅನಿಶ್ಚಿತ ಪರಿಸ್ಥಿತಿಯನ್ನು ಅಂತ್ಯಗೊಳಿಸುವಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದು ಹೇಳಲಾಗಿದೆ.
‘2020ರ ಏಪ್ರಿಲ್‌ನಲ್ಲಿ ಇದ್ದ ಸ್ಥಿತಿಯ ಮರುಸ್ಥಾಪನೆ ನಮ್ಮ ಗುರಿ. ಆ ನಂತರ ಗಡಿಯಲ್ಲಿ ನಿಯೋಜಿಸಿರುವ ಸೇನೆ ವಾಪಸು ಕರೆಯಿಸಿಕೊಳ್ಳುವುದು ಮತ್ತು ಗಡಿಯಲ್ಲಿ ಸಹಜ ಗಸ್ತು ನಿರ್ವಹಣೆ ಇರಲಿದೆ. ಸಹಜ ಗಸ್ತು ಈಗಲೇ ಆರಂಭವಾಗುವುದಿಲ್ಲ. ಅದು, ಹಂತ ಹಂತವಾಗಿ ಜಾರಿಗೆ ಬರಲಿದೆ’ ಎಂದು ಸೇನಾ ಮುಖ್ಯಸ್ಥರು ಹೇಳಿದರು.
‘ಇದು, 2020ರ ಏಪ್ರಿಲ್‌ನಲ್ಲಿ ಇದ್ದ ನಮ್ಮ ನಿಲುವು. ಈಗಲೂ ಅದೇ ನಿಲುವು ಇದೆ. ಈಗ ನಾವು ಪರಸ್ಪರ ವಿಶ್ವಾಸ ಮರುಸ್ಥಾಪಿಸಲು ಯತ್ನಿಸುತ್ತಿದ್ದೇವೆ. ಉಭಯತ್ರರು ಪರಸ್ಪರ ನೋಡುವಂತಾಗಲು ಹಾಗೂ ಪರಸ್ಪರ ಮನದಟ್ಟು ಮಾಡಲು ಬೇಕಾದ ಬಫರ್ ವಲಯವನ್ನು ಈಗ ಸೃಷ್ಟಿಸಲಾಗಿದೆ’ ಎಂದು ತಿಳಿಸಿದರು.
2020ರ ಏಪ್ರಿಲ್‌ನಲ್ಲಿನ ವಾತಾವರಣ ಸೃಷ್ಟಿಸಲು ಬೇಕಾದ ಅನುಕೂಲವನ್ನು ಗಸ್ತು ಒದಗಿಸಲಿದೆ. ಆ ಪ್ರಕ್ರಿಯೆ ಈಗ ಆರಂಭವಾಗಿದೆ ಎಂದು ವಿವರಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಸಂಘರ್ಷ ಆರಂಭಕ್ಕೂ ಮೊದಲು ಉಭಯ ಸೇನೆಗಳ ಯೋಧರು ಗಸ್ತು ನಡೆಸುತ್ತಿದ್ದಂತೆ ಮುಂದೆಯೂ ಗಸ್ತು ನಡೆಸುವರು ಎಂದು ಹೇಳಿದ್ದರು.
‘ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ಒಪ್ಪಂದ ಮೂಡುವುದು ಕಷ್ಟ’
ನವದೆಹಲಿ: ‘ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಒಡಂಬಡಿಕೆಗೆ ಬರುವುದು ಸುಲಭವಲ್ಲ’ ಎಂದು ನೌಕಾಪಡೆಯ ಉಪ ಮುಖ್ಯಸ್ಥ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಚೀನಾ ಗಡಿ ವಿಷಯದಲ್ಲಿ ಒಪ್ಪಂದಕ್ಕೆ ಬಂದಿರುವುದನ್ನು ತಿಳಿದು ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದರು. ನೌಕಾಪಡೆಯ ಸ್ವಾವಲಂಬನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿ ವಿಷಯದಲ್ಲಿ ಒಪ್ಪಂದಕ್ಕೆ ಬರುವುದು ಕಷ್ಟ. ಅಲ್ಲಿ ಭಿನ್ನ ದೃಷ್ಟಿಕೋನವಿರುತ್ತದೆ. ಚಿಂತನೆ ಇರುತ್ತದೆ. ಭಾವನಾತ್ಮಕ ವಿಷಯಗಳಿರುತ್ತವೆ. ಭೂಮಿಗೆ ಸಂಬಂಧಿಸಿದ ವಿವಾದ ಇರುತ್ತದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಎಲ್ಲವನ್ನು ಗಮನಿಸದೇ ಮಾತುಕತೆ ನಡೆಸಬೇಕಾಗುತ್ತದೆ ಎಂದರು.
ಈಗ ಒಪ್ಪಂದಕ್ಕೆ ಬರಲಾಗಿದೆ. ಅದರ ವಿವರಗಳು ನನಗೆ ಗೊತ್ತಿಲ್ಲ. ನನಗೆ ಗೊತ್ತಿರಬೇಕಾದ ಅಗತ್ಯವೂ ಇಲ್ಲ. ಏನೋ ಒಂದು ಒಪ್ಪಂದವಾಗಿದೆ. ಎಲ್ಲರಿಗೂ ಖುಷಿಯಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.