ನವದೆಹಲಿ: ಮಣಿಪುರದ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಹೇಳಿದರು.
ದೆಹಲಿಯಲ್ಲಿ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್ ಆಯೋಜಿಸಿದ್ದ 'ರಾಷ್ಟ್ರೀಯ ಭದ್ರತಾ ದೃಷ್ಟಿಕೋನಗಳು' ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
'ನೆರೆ ರಾಷ್ಟ್ರ ಮ್ಯಾನ್ಮಾರ್ ಮತ್ತು ಗಡಿ ರಾಜ್ಯ ಮಣಿಪುರದಲ್ಲಿ ಅಸ್ಥಿರತೆಯಿದೆ. ಈ ಬೆಳವಣಿಗೆ ದೇಶದ ಒಟ್ಟಾರೆ ಭದ್ರತೆಗೆ ಒಳ್ಳೆಯದಲ್ಲ. ಆಂತರಿಕ ಭದ್ರತೆ ಎನ್ನುವುದು ನಮಗೆ ಬಹಳ ಮುಖ್ಯವಾಗಿದೆ' ಎಂದರು.
‘ಸಂಘರ್ಷ ಪೀಡಿತ ಮಣಿಪುರದ ಪರಿಸ್ಥಿತಿಯ ಹಿಂದೆ ವಿದೇಶಿ ಕೈವಾಡವಿರುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ನೆರೆ ರಾಷ್ಟ್ರ ಚೀನಾ ಹಲವು ದಶಕಗಳಿಂದ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ದಂಗೆಗಳಿಗೆ ಉತ್ತೇಜನ ನೀಡುತ್ತಿದೆ. ಅಲ್ಲದೇ ಅಲ್ಲಿನ ಬಂಡುಕೋರ ಗುಂಪುಗಳಿಗೆ ನೆರವನ್ನೂ ನೀಡುತ್ತಿದೆ. ಈ ಕೆಲಸ ಇನ್ನೂ ಮುಂದುವರಿದಿದೆ' ಎಂದು ಹಿಂಸಾಚಾರದ ಹಿಂದೆ ವಿದೇಶಿ ಕೈವಾಡವಿರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ಮಣಿಪುರ ಹಿಂಸಾಚಾರಕ್ಕೂ ಮಾದಕ ವಸ್ತುಗಳ ಕಳ್ಳಸಾಗಣೆಗೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನರವಾಣೆ, 'ಈಶಾನ್ಯ ರಾಜ್ಯಗಳಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಒಂದು ಪ್ರಮುಖ ಸಮಸ್ಯೆಯಾಗಿದೆ. ನಾವು ಗೋಲ್ಡನ್ ಟ್ರಯಾಂಗಲ್‌ನಿಂದ (ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಲಾವೋಸ್– ಹೆಚ್ಚು ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುವ ಸ್ಥಳಗಳು) ಸ್ವಲ್ಪ ದೂರದಲ್ಲಿದ್ದೇವೆ. ಮ್ಯಾನ್ಯಾರ್‌ನಲ್ಲಿ ಈಗ ಮಿಲಿಟರಿ ಆಡಳಿತವಿದ್ದೂ, ಅವಸ್ಥೆಯ ಗೂಡಾಗಿದೆ. ಸರ್ಕಾರವಿದ್ದಾಗಲೂ ಅಲ್ಲಿನ ಗಡಿ ಭಾಗದ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದು ಭಾರತದ ಗಡಿಯಾಗಿರಲಿ, ಚೀನಾದ ಗಡಿಯಾಗಿರಲಿ ಅಥವಾ ಥೈಲ್ಯಾಂಡ್ ಗಡಿಯಾಗಿರಲಿ ಮಾದಕ ವಸ್ತುಗಳ ಕಳ್ಳಸಾಗಣೆ ಮುಂದುವರಿದಿದೆ‘ ಎಂದರು.
ಆಡಳಿತ ಚುಕ್ಕಾಣಿ ಹಿಡಿದವರು ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಅತ್ಯುತ್ತಮ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.